ನಾಳೆ ‘ಪರಂಪರೆ ರಕ್ಷಿಸಿ’ ಕಾರ್ಯಕ್ರಮ: ಶರದ್ ಯಾದವ್ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜು

Update: 2017-08-16 14:50 GMT

ಪಾಟ್ನ, ಆ.16: ಸಂಯುಕ್ತ ಜನತಾದಳ(ಜೆಡಿಯು) ಭಿನ್ನಮತೀಯರ ಗುಂಪಿನ ಮುಖಂಡ ಶರದ್ ಯಾದವ್ ಅವರು ನಾಳೆ (ಆ.17ರಂದು) ಆಯೋಜಿಸಿರುವ ‘ಪರಂಪರೆ ರಕ್ಷಿಸಿ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಪ್ರಮುಖ ಪಕ್ಷಗಳ ಮುಖಂಡರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ತಮ್ಮ ಬಲಪ್ರದರ್ಶನಕ್ಕೆ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಶರದ್ ಆಯೋಜಿಸಿದ್ದಾರೆ ಎನ್ನಲಾಗಿದೆ.

    ಆದರೆ ಇದನ್ನು ಬಲಪ್ರದರ್ಶನ ಎಂದು ವ್ಯಾಖ್ಯಾನಿಸಲಾಗದು. ಇದು ದೇಶದ ‘ಸಮಗ್ರ ಸಂಸ್ಕೃತಿ’ಯನ್ನು ರಕ್ಷಿಸುವ ಉದ್ದೇಶದಿಂದ ವಿಪಕ್ಷಗಳು ಒಗ್ಗೂಡಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದು ಶರದ್ ಯಾದವ್ ಹೇಳಿದ್ದಾರೆ. ಯಾರೆಲ್ಲಾ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ವಿಪಕ್ಷಗಳ ಯಾವ ಮುಖಂಡರೂ ಗೈರು ಹಾಜರಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್, ಎಡಪಕ್ಷಗಳು, ಸಮಾಜವಾದಿ ಪಕ್ಷ, ಬಿಎಸ್ಪಿ, ಟಿಎಂಸಿ ಹಾಗೂ ಇತರ ಪಕ್ಷಗಳು ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದವರು ತಿಳಿಸಿದರು.

ಸಮಗ್ರ ಸಂಸ್ಕೃತಿ ಎಂಬುದು ಸಂವಿಧಾನದ ಮೂಲ ಆಶಯವಾಗಿದ್ದು ಇದನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು. ಸಮಗ್ರ ಪರಂಪರೆ ರಕ್ಷಿಸಿ ಕಾರ್ಯಕ್ರಮ ಯಾರೊಬ್ಬರ ವಿರುದ್ಧವಲ್ಲ. ಆದರೆ ದೇಶದ ಹಿತಾಸಕ್ತಿಯ ನಿಟ್ಟಿನಲ್ಲಿ , ದೇಶದ 125 ಕೋಟಿ ಪ್ರಜೆಗಳ ಹಿತಾಸಕ್ತಿಯ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು, ದುರ್ಬಲ, ಅಸಹಾಯಕ ವರ್ಗದವರಿಗೆ ಬಾಳಲು ಕಷ್ಟಕರವಾದ ಪರಿಸ್ಥಿತಿ ಇದೀಗ ನೆಲೆಸಿದೆ ಎಂದು ಜೆಎನ್‌ಯು ವಿದ್ಯಾರ್ಥಿ ನಝೀಬ್ ಅಹ್ಮದ್ ಹಾಗೂ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣವನ್ನು ಉದಾಹರಿಸಿ ಹೇಳಿದರು.

ನಂಬಿಕೆಯ ಹೆಸರಲ್ಲಿ ಹಿಂಸಾಚಾರ ಎಸಗುವುದು ಸಲ್ಲದು ಎಂಬ ಪ್ರಧಾನಿ ಮೋದಿ ಹೇಳಿಕೆ ಸ್ವಾಗತಾರ್ಹವಾಗಿದೆ. ಆದರೆ ಈ ಸೂತ್ರವನ್ನು ಪಾಲಿಸುವಂತೆ ಮೊದಲು ಅವರು ಬಿಜೆಪಿ ಆಡಳಿತದ ರಾಜ್ಯಗಳ ಸರಕಾರಕ್ಕೆ ಸಲಹೆ ನೀಡಬೇಕು ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News