ಮಕ್ಕಳ ಸಾವು ಸಂಭವಿಸಿರುವುದು ಮೆದುಳು ಜ್ವರದಿಂದ ಅಲ್ಲ

Update: 2017-08-16 15:04 GMT

ಹೊಸದಿಲ್ಲಿ,ಆ 16 : ಗೋರಖ್‌ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚಿನ ಮಕ್ಕಳ ಸಾವಿಗೆ ಮೆದುಳು ಜ್ವರ ಕಾರಣವಲ್ಲ ಎಂಬ ವಿಚಾರವನ್ನು ಆಸ್ಪತ್ರೆಯಲ್ಲಿರುವ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸಿವೆ. ಉತ್ತರಪ್ರದೇಶದ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ 5 ದಿನಗಳಲ್ಲಿ 70ಕ್ಕಿಂತಲೂ ಅಧಿಕ ಮಕ್ಕಳು ಮೃತಪಟ್ಟಿದ್ದು, ಸಾವಿಗೆ ಕಾರಣವೇನು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ದೊರಕಿಲ್ಲ. ರಾಜ್ಯದ ಈ ಭಾಗದಲ್ಲಿ ದೀರ್ಘಾವಧಿಯಿಂದ ಕಾಡುತ್ತಿರುವ ಮೆದುಳು ಜ್ವರ ಮಕ್ಕಳ ಸಾವಿಗೆ ಕಾರಣ ಎಂದು ರಾಜ್ಯ ಸರಕಾರ ಹೇಳುತ್ತಿದೆ.

ಆಸ್ಪತ್ರೆಯಲ್ಲಿ ದ್ರವೀಕೃತ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿರುವುದು ಮಕ್ಕಳ ಸಾವಿಗೆ ಕಾರಣ ಎನ್ನುವ ವರದಿಯನ್ನು ಅದು ನಿರಾಕರಿಸಿದೆ. ಆಸ್ಪತ್ರೆಯ ದಾಖಲೆಗಳು ಮಿಂಟ್‌ಗೆ ಪತ್ರಿಕೆಗೆ ದೊರೆತಿದೆ. ಅದರ ಪ್ರಕಾರ, ಆಗಸ್ಟ್ 10 ಹಾಗೂ 11ರಂದು 30 ಮಕ್ಕಳು ಮೃತಪಟ್ಟಿದ್ದಾರೆ. ಇದರಲ್ಲಿ 5 ಮಕ್ಕಳು ತೀವ್ರ ಮೆದುಳು ಜ್ವರದಿಂದ, 1 ಮಗು ಪಿತ್ತ ಜನಕಾಂಗದ ತೊಂದರೆಯಿಂದ ಮೃತಪಟ್ಟಿದೆ. ಉಳಿದ ಶಿಶುಗಳು ಅನಾರೋಗ್ಯದಿಂದ ಮೃತಪಟ್ಟಿವೆ. ಇದರಲ್ಲಿ ಕೆಲವು ನ್ಯುಮೋನಿಯಾ, ನೆತ್ತರು ನಂಜು, ಸ್ವೈನ್ ಫ್ಲೂನಿಂದ ಹಾಗೂ ಇತರ ಕೆಲವು ಅವಧಿ ಪೂರ್ವ ಜನಿಸಿದ ಕಾರಣಕ್ಕಾಗಿ ಸಾವನ್ನಪ್ಪಿವೆ. ಆಗಸ್ಟ್ 12ರಂದು ಮೃತಪಟ್ಟ 13 ಮಕ್ಕಳಲ್ಲಿ 1 ಮಗು ಮಾತ್ರ ಪಿತ್ತಜನಾಕಾಂಗದ ಸಮಸ್ಯೆಯಿಂದ ಮೃತಪಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News