ರೊಹಿಂಗ್ಯಾ ನಿರಾಶ್ರಿತರನ್ನು ಭಾರತ ಬಲವಂತವಾಗಿ ವಾಪಸ್ ಕಳುಹಿಸಬಾರದು

Update: 2017-08-17 14:18 GMT

ನ್ಯೂಯಾರ್ಕ್, ಆ. 17: ಭಾರತ ತನ್ನ ಅಂತಾರಾಷ್ಟ್ರೀಯ ಕಾನೂನು ಬಾಧ್ಯತೆಗಳನ್ನು ಗೌರವಿಸಬೇಕು ಹಾಗೂ ರೊಹಿಂಗ್ಯಾ  ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ಬಲವಂತವಾಗಿ ವಾಪಸ್ ಕಳುಹಿಸಬಾರದು ಎಂದು ಜಾಗತಿಕ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ.

ಗೃಹ ವ್ಯವಹಾರಗಳ ಸಹಾಯಕ ಸಚಿವ ಕಿರಣ್ ರಿಜೀಜು ಸಂಸತ್ತಿಗೆ ನೀಡಿರುವ ಹೇಳಿಕೆಗೆ ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಶ್ಯ ನಿರ್ದೇಶಕಿ ಮೀನಾಕ್ಷಿ ಗಂಗುಲಿ ಪ್ರತಿಕ್ರಿಯಿಸುತ್ತಿದ್ದರು.

‘‘ರೊಹಿಂಗ್ಯಾ  ಮುಸ್ಲಿಮರು ಸೇರಿದಂತೆ ಅಕ್ರಮ ವಿದೇಶೀಯರ ಗಡಿಪಾರಿಗಾಗಿ ಸರಕಾರ ವಿವರವಾದ ಸೂಚನೆಗಳನ್ನು ಕಳುಹಿಸಿದೆ’’ ಎಂಬುದಾಗಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಲ್ಲಿ ಸಚಿವರು ಹೇಳಿದ್ದರು.

ಭಾರತದಲ್ಲಿ ಸುಮಾರು 40,000 ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

‘‘ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಟಿಬೆಟ್ ಸೇರಿದಂತೆ ನೆರೆಯ ದೇಶಗಳಿಂದ ಪರಾರಿಯಾಗಿ ಬಂದಿರುವ ಶೋಷಿತ ವರ್ಗಗಳಿಗೆ ಸೇರಿದ ಜನರಿಗೆ ಆಶ್ರಯ ನೀಡಿದ ಸುದೀರ್ಘ ದಾಖಲೆ ಭಾರತಕ್ಕಿದೆ’’ ಎಂದು ಮೀನಾಕ್ಷಿ ಹೇಳಿದರು.

ರೊಹಿಂಗ್ಯಾ ಮುಸ್ಲಿಮರು ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಪ್ರಧಾನವಾಗಿ ನೆಲೆಸಿರುವ ಮುಸ್ಲಿಮ್ ಅಲ್ಪಸಂಖ್ಯಾತ ಜನಾಂಗವಾಗಿದೆ. ಮ್ಯಾನ್ಮಾರ್‌ನಲ್ಲಿ ಸೇನೆಯ ಹಿಂಸೆಗೆ ಬೆದರಿ ಅವರು ಆ ದೇಶದಿಂದ ಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.

 ‘‘ನಿರಾಶ್ರಿತ ಸ್ಥಾನಮಾನವನ್ನು ನಿರ್ಧರಿಸುವ ಇಚ್ಛೆಯಾಗಲಿ, ವ್ಯವಸ್ಥೆಯಾಗಲಿ ಇಲ್ಲದೆ ರೊಹಿಂಗ್ಯಾರನ್ನು ಗಡಿಪಾರು ಮಾಡುವ ಯಾವುದೇ ಯೋಜನೆಯನ್ನು ಭಾರತ ಸರಕಾರ ನಿಲ್ಲಿಸಬೇಕು. ಬದಲಿಗೆ, ಅವರು ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವಂತೆ ಅವರನ್ನು ದಾಖಲಿಸಿಕೊಳ್ಳಬೇಕು’’ ಎಂದು ಮೀನಾಕ್ಷಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ವಾಸಿಸುವ ಸುಮಾರು 16,500 ರೊಹಿಂಗ್ಯರು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ (ಯುಎನ್‌ಎಚ್‌ಸಿಆರ್)ಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಎಂದು ಎಚ್‌ಆರ್‌ಡಬ್ಲು ಹೇಳಿದೆ. ಆದರೆ, ಸಾವಿರಾರು ಮಂದಿ ಇನ್ನೂ ನೋಂದಾಯಿಸಲ್ಪಟ್ಟಿಲ್ಲ ಎಂದು ಸರಕಾರ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News