ಆಸ್ಟ್ರೇಲಿಯ: ಬುರ್ಖಾ ನಿಷೇಧಕ್ಕಾಗಿ ಸಂಸತ್ತಿನಲ್ಲಿ ಬುರ್ಖಾ ಧರಿಸಿದ ಸೆನೆಟರ್‌ಗೆ ಮಂಗಳಾರತಿ!

Update: 2017-08-17 14:47 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಆ. 17: ಆಸ್ಟ್ರೇಲಿಯದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂಬ ಆಂದೋಲನದ ಭಾಗವಾಗಿ ಸಂಸತ್ತಿಗೆ ಬುರ್ಖಾ ಧರಿಸಿ ಹೋದ ಓರ್ವ ಮಹಿಳಾ ಸೆನೆಟರ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಕ್ಯಾನ್‌ಬೆರದಲ್ಲಿರುವ ಸಂಸತ್ ಭವನದಲ್ಲಿ ಸೆನೆಟರ್ ಪೌಲಿನ್ ಹ್ಯಾನ್ಸನ್ ಬುರ್ಖಾ ಧರಿಸಿ ಸುಮಾರು 20 ನಿಮಿಷಗಳ ಕಾಲ ಕುಳಿತರು.

ಬಳಿಕ ಮಾತನಾಡಿದ ಅವರು, ಬುರ್ಖಾವನ್ನು ನಿಷೇಧಿಸಬೇಕು ಎಂದು ಕರೆ ನೀಡಿದರು ಹಾಗೂ ಅದನ್ನು ಭಯೋತ್ಪಾದನೆಯ ಜೊತೆ ತಳುಕು ಹಾಕಿದರು. ಹ್ಯಾನ್ಸನ್ ತೀರಾ ಬಲಪಂಥೀಯ ‘ವನ್ ನೇಶನ್’ ಪಕ್ಷದ ಮುಖ್ಯಸ್ಥೆಯಾಗಿದ್ದಾರೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯದ ಅಟಾರ್ನಿ ಜನರಲ್ ಜಾರ್ಜ್ ಬ್ರಾಂಡಿಸ್ ಹ್ಯಾನ್ಸನ್‌ರನ್ನು ಟೀಕಿಸಿದರು.

 ಬುರ್ಖಾವನ್ನು ನಿಷೇಧಿಸುವ ಉದ್ದೇಶ ಸರಕಾರಕ್ಕಿಲ್ಲ ಎಂದು ಜಾರ್ಜ್ ಹೇಳಿದರು. ಇದು ಮುಸ್ಲಿಮ್ ಸಮುದಾಯದ ವಿರುದ್ಧ ಮಾಡುವ ದಾಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳಿಗೆ ಮುಸ್ಲಿಮರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

‘‘ಆ ಸಮುದಾಯವನ್ನು ಅವಹೇಳನಗೈಯುವುದು, ಅದನ್ನು ಮೂಲೆಗುಂಪು ಮಾಡುವುದು, ಅದರ ಧಾರ್ಮಿಕ ವಸ್ತ್ರವನ್ನು ಅಪಹಾಸ್ಯಗೈಯುವುದು ಆಘಾತಕಾರಿ ವಿಷಯವಾಗಿದೆ’’ ಎಂದರು.

 ‘‘ಇಸ್ಲಾಮ್ ಧರ್ಮವನ್ನು ಅನುಸರಿಸುವ ಸುಮಾರು 5 ಲಕ್ಷ ಆಸ್ಟ್ರೇಲಿಯನ್ನರು ನಮ್ಮಲ್ಲಿದ್ದಾರೆ. ಅವರ ಪೈಕಿ ಅತಿ ಹೆಚ್ಚು ಅತ್ಯಂತ ಬಹುಸಂಖ್ಯಾತರು ಕಾನೂನು ಪಾಲಕರು ಮತ್ತು ಒಳ್ಳೆಯ ಆಸ್ಟ್ರೇಲಿಯನ್ನರು. ಸೆನೆಟರ್ ಹ್ಯಾನ್‌ನ್ ಅವರೇ, ಒಳ್ಳೆಯ ಮತ್ತು ಕಾನೂನು ಪಾಲಕ ಆಸ್ಟ್ರೇಲಿಯನ್ನರಾಗುವುದು ಮತ್ತು ಧರ್ಮಭೀರು ಮುಸ್ಲಿಮ್ ಆಗುವುದು ಒಂದಕ್ಕೊಂದು ಪೂರಕವಾಗಿದೆ’’ ಎಂದು ಅಟಾರ್ನಿ ಜನರಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News