ಶಾರ್ಲಟ್ಸ್‌ವಿಲ್ ಹಿಂಸಾಚಾರ ಖಂಡಿಸಿದ ಮೈಕ್ರೊಸಾಫ್ಟ್, ಫೇಸ್‌ಬುಕ್, ಆ್ಯಪಲ್ ಸಿಇಒಗಳು

Update: 2017-08-17 14:47 GMT

ಸ್ಯಾನ್‌ಫ್ರಾನ್ಸಿಸ್ಕೊ, ಆ. 17: ಅಮೆರಿಕದ ವರ್ಜೀನಿಯ ರಾಜ್ಯದ ಶಾರ್ಲಟ್ಸ್‌ವಿಲ್‌ನಲ್ಲಿ ‘ಬಿಳಿಯ ಶ್ರೇಷ್ಠತಾವಾದಿ’ಗಳು ನಡೆಸಿದ ಸಭೆಯಲ್ಲಿ ಸ್ಫೋಟಿಸಿದ ಹಿಂಸೆಯ ಬಗ್ಗೆ ವೌನ ಮುರಿದಿರುವ ಮೈಕ್ರೊಸಾಫ್ಟ್‌ನ ಭಾರತೀಯ ಸಂಜಾತ ಸಿಇಒ ಸತ್ಯ ನಾಡೆಲ್ಲ, ಆ್ಯಪಲ್‌ನ ಟಿಮ್ ಕುಕ್ ಮತ್ತು ಫೇಸ್‌ಬುಕ್‌ನ ಮಾರ್ಕ್ ಝುಕರ್‌ಬರ್ಗ್, ಘಟನೆಯನ್ನು ಖಂಡಿಸಿದ್ದಾರೆ.

ಈ ಘಟನೆಯು ‘ಭಯಾನಕ’ ಮತ್ತು ದೇಶಕ್ಕೆ ‘ಅವಮಾನಕರ’ ಎಂದು ಅವರು ಬಣ್ಣಿಸಿದ್ದಾರೆ.

‘‘ವರ್ಜೀನಿಯದಲ್ಲಿ ಬಿಳಿಯ ರಾಷ್ಟ್ರೀಯತಾವಾದಿಗಳು ಪ್ರಚೋದಿಸಿದ ವಿಚಾರಹೀನ ಹಿಂಸೆ, ತಾರತಮ್ಯ ಮತ್ತು ಅಸಹಿಷ್ಣುತೆಗೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ದುರಂತದ ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ನಮ್ಮ ಹೃದಯ ಮಿಡಿಯುತ್ತದೆ’’ ಎಂದು ತನ್ನ ನಾಯಕತ್ವ ತಂಡಕ್ಕೆ ಕಳುಹಿಸಿದ ಇಮೇಲ್‌ನಲ್ಲಿ ನಾಡೆಲ್ಲ ಹೇಳಿದ್ದಾರೆ.

ಫೇಸ್‌ಬುಕ್ ಸಿಇಒ ಝುಕರ್‌ಬರ್ಗ್ ಗುರುವಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆಯುತ್ತಾ, ‘‘ನಮ್ಮ ಸಮುದಾಯದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅದಕ್ಕಾಗಿಯೇ, ದ್ವೇಷಾಪರಾಧಗಳು ಮತ್ತು ಭಯೋತ್ಪಾದನೆ ಕೃತ್ಯಗಳನ್ನು ಸಂಭ್ರಮಿಸುವ ಯಾವುದೇ ಸಂದೇಶಗಳನ್ನು ನಾವು ತೆಗೆಯುತ್ತಿದ್ದೇವೆ’’ ಎಂದು ಹೇಳಿದ್ದಾರೆ.

‘‘ಬಿಳಿಯ ಶ್ರೇಷ್ಠತಾವದಿಗಳು ಮತ್ತು ನಾಝಿಗಳು ಹಾಗೂ ಅವರನ್ನು ವಿರೋಧಿಸಿ ಮಾನವಹಕ್ಕುಗಳಿಗಾಗಿ ಹೋರಾಡುವವರ ನಡುವೆ ನೈತಿಕ ಸಾಮ್ಯತೆ ಇದೆ ಎಂದು ನಾನು ಒಪ್ಪುವುದಿಲ್ಲ. ಈ ಎರಡು ಬಣಗಳನ್ನು ಸಮೀಕರಿಸುವುದು ಅಮೆರಿಕನ್ನರೆಂಬ ನಮ್ಮ ಕಲ್ಪನೆಗೆ ವಿರುದ್ಧವಾಗುತ್ತದೆ’’ ಎಂದು ಆ್ಯಪಲ್ ಸಿಇಒ ಕುಕ್ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News