ವ್ಯಾಪಾರ ಸಲಹಾ ಸಮಿತಿಗಳನ್ನು ಬರ್ಖಾಸ್ತುಗೊಳಿಸಿದ ಟ್ರಂಪ್

Update: 2017-08-17 14:33 GMT

ವಾಶಿಂಗ್ಟನ್, ಆ. 17: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎರಡು ಮಹತ್ವದ ವ್ಯಾಪಾರ ಸಲಹಾ ಸಮಿತಿಗಳನ್ನು ಬರ್ಖಾಸ್ತುಗೊಳಿಸಿದ್ದಾರೆ.

ಕಳೆದ ವಾರಾಂತ್ಯದಲ್ಲಿ ವರ್ಜೀನಿಯ ರಾಜ್ಯದ ಶಾರ್ಲಟ್ಸ್‌ವಿಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಲವಾರು ಕಂಪೆನಿಗಳು ಮುಖ್ಯ ಕಾರ್ಯನಿವಾಹಕರು ಈ ವ್ಯಾಪಾರ ಸಲಹಾ ಸಮಿತಿಗಳಿಂದ ಹೊರಹೋದ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

ಶಾರ್ಲಟ್ಸ್‌ವಿಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಬಿಳಿಯ ಶ್ರೇಷ್ಠತಾವಾದಿಗಳು ಮಾತ್ರ ಕಾರಣರಲ್ಲ, ಅವರನ್ನು ವಿರೋಧಿಸಿದ ಜನಾಂಗೀಯ ತಾರತಮ್ಯ ವಿರೋಧಿ ಕಾರ್ಯಕರ್ತರೂ ಅದಕ್ಕೆ ಜವಾಬ್ದಾರರು ಎಂಬುದಾಗಿ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಪ್ರಮುಖ ರಿಪಬ್ಲಿಕನ್ ನಾಯಕರ ಜೊತೆಗೆ, ಅಮೆರಿಕದ ಮಿತ್ರದೇಶ ಬ್ರಿಟನ್ ಕೂಡ ಈ ವಿಷಯದಲ್ಲಿ ಟ್ರಂಪ್‌ರನ್ನು ಟೀಕಿಸಿದೆ. ಹಾಗಾಗಿ, ಈಗಾಗಲೇ ವಿವಾದಗಳ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಏಳು ತಿಂಗಳ ಅಧ್ಯಕ್ಷರು, ಮತ್ತಷ್ಟು ವಿವಾದಕ್ಕೆ ತುತ್ತಾಗಿದ್ದಾರೆ.

ಶನಿವಾರ ರಾತ್ರಿ ನಡೆದ ಹಿಂಸಾಚಾರದ ವೇಳೆ, ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನಕಾರರ ಮೇಲೆ ಕಾರೊಂದು ಹರಿದು 32 ವರ್ಷದ ಹೆದರ್ ಹೆಯರ್ ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಕ್ಯಾಂಬೆಲ್ ಸೂಪ್ ಕಂಪೆನಿಯ ಸಿಇಒ ಡಿನೈಸ್ ಮೊರಿಸನ್ ಮತ್ತು 3ಎಂ ಕಂಪೆನಿಯ ಸಿಇಒ ಇಂಜ್ ತುಲಿನ್ ಸೇರಿದಂತೆ 8 ಕಂಪೆನಿಗಳ ಸಿಇಒಗಳು ಹೊರಹೋದ ಹಿನ್ನೆಲೆಯಲ್ಲಿ ‘ಅಮೆರಿಕನ್ ಮ್ಯಾನುಫ್ಯಾಕ್ಚರಿಂಗ್ ಕೌನ್ಸಿಲ್’ ಮತ್ತು ‘ಸ್ಟ್ರಾಟಜಿಕ್ ಆ್ಯಂಡ್ ಪಾಲಿಸಿ ಫೋರಂ’ಗಳನ್ನು ಬರ್ಖಾಸ್ತುಗೊಳಿಸುವುದಾಗಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News