ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣ, ಇಬ್ಬರು ವೈದ್ಯರು ಹೊಣೆ: ಜಿಲ್ಲಾ ಮ್ಯಾಜಿಸ್ಟೇಟ್ ವರದಿ

Update: 2017-08-17 16:50 GMT

ಹೊಸದಿಲ್ಲಿ, ಆ. 17: ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೆದುಳು ಜ್ವರದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಮಕ್ಕಳು ಸಾವನ್ನಪ್ಪಲು ಆಮ್ಲಜನಕ ಕೊರತೆ ಕಾರಣ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ ತನ್ನ ವರದಿಯಲ್ಲಿ ಪ್ರತಿಪಾದಿಸಿದ್ದಾರೆ.

ಈ ಹೃದಯ ವಿದ್ರಾವಕ ಘಟನೆಗೆ ಕಾರಣರಾದ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಆರ್.ಕೆ. ಮಿಶ್ರಾ ಹಾಗೂ ಆಮ್ಲಜನಕ ಖರೀದಿ ಸಮಿತಿಯ ಅಧ್ಯಕ್ಷರನ್ನು ರೌಟೇಲಾ ವರದಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

 ಪ್ರಾಣ ಉಳಿಸುವ ಉದ್ಯಮದಲ್ಲಿ ತೊಡಗಿಕೊಂಡಿರುವ ಪುಷ್ಪಾ ಸೇಲ್ಸ್ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಬಾರದಿತ್ತು. ಆದುದರಿಂದ ಮಕ್ಕಳ ಸಾವಿಗೆ ಪುಷ್ಪಾ ಸೇಲ್ಸ್ ಕೂಡ ಹೊಣೆಯಾಗಿದೆ ಎಂದು ರೌಟೇಲಾ ಹೇಳಿದ್ದಾರೆ.

 ಈ ದುರಂತಕ್ಕೆ ಡಾ. ಕಫೀಲ್ ಖಾನ್ ಕೂಡ ಸಮಾನ ಹೊಣೆಗಾರರು ಎಂದು ಜಿಲ್ಲಾ ಮ್ಯಾಜಿಸ್ಟೇಟ್ ವರದಿ ಹೇಳಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ವರದಿಯನ್ನು ತಾನು ಸ್ವೀಕರಿಸಿರುವುದಾಗಿ ಎಂದು ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ದೃಢಪಡಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಆಯೋಜಿಸಿದ ಎರಡನೇ ತನಿಖೆಯ ಆರಂಭಿಕ ವರದಿ ಆಗಸ್ಟ್ 20ರಂದು ಸಲ್ಲಿಕೆಯಾಗಲಿದೆ.

ಮಕ್ಕಳ ಸಾವು ಸಂಭವಿಸಿದ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ವೈದ್ಯ ವೃತ್ತಿ ನಡೆಸುವುದನ್ನು ನಿರ್ಬಂಧಿಸಬೇಕು ಹಾಗೂ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.

ನ್ಯಾಯವಾದಿ ಸುನೀತಾ ಶರ್ಮಾ ಹಾಗೂ ಸಾಮಾಜಿಕ ಕಾರ್ಯಕರ್ತೆ ಕಮಲೇಶ್ ಸಿಂಗ್ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ. ಈ ದಾವೆ ಶುಕ್ರವಾರ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News