ಬೆಳ್ಳಂದೂರು ಕೆರೆಯಲ್ಲಿ ನೊರೆ: ಕರ್ನಾಟಕ ಸರಕಾರದ ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೋಟೀಸ್

Update: 2017-08-17 17:16 GMT

ಹೊಸದಿಲ್ಲಿ, ಆ. 17: ಬೆಂಗಳೂರಿನ ಬೆಳ್ಳಂದೂರು ಕೆರೆಯ ಮಾಲಿನ್ಯ ನಿವಾರಿಸಲು ವಿಫಲವಾಗಿರುವ ಕರ್ನಾಟಕ ಸರಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡಿದೆ.

 ಮಂಡಳಿ ನಿರ್ದೇಶನದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಆಗಸ್ಟ್ 22ರಂದು ಹಾಜರಾಗಿ ವಿವರ ನೀಡುವಂತೆ ನಿರ್ದೇಶಿಸಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಗುರುವಾರ ಕರ್ನಾಟಕ ಸರಕಾರದ ಉನ್ನತ ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡಿದೆ.

 ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕೆರೆ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಹಾಗೂ ನೀರಿನಾಶ್ರಯ ರಕ್ಷಿಸುವ ಕುರಿತು ಮಂಡಳಿ ಎಪ್ರಿಲ್ 19ರಂದು ನೀಡಿದ್ದ ನಿರ್ದೇಶನದ ಬಗ್ಗೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪೀಠ ತಿಳಿಸಿದೆ.

 ನಮ್ಮ ಬೆಂಗಳೂರು ಫೌಂಡೇಶನ್ ಅನ್ನು ಪ್ರತಿನಿಧಿಸುತ್ತಿರುವ ಶ್ರೀಧರ್ ಪಬ್ಬಿಸೆಟ್ಟಿ , ಬೆಳ್ಳಂದೂರು ಕೆರೆಯಿಂದ ಹೊಸತಾಗಿ ನೊರೆ ಉಕ್ಕುತ್ತಿದೆ ಹಾಗೂ ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕೆರೆ ನೀರು ಉಕ್ಕಿ ಸುತ್ತಮುತ್ತಲಿನ ಬೀದಿಗಳಲ್ಲಿ ಹರಿಯುತ್ತಿದೆ ಎಂಬುದನ್ನು ಪೀಠದ ಗಮನಕ್ಕೆ ತಂದಿದ್ದರು. ಈ ಘಟನೆಗಳ ಬಗ್ಗೆ ಮಂಡಳಿ ಗಮನ ಹರಿಸುವಂತೆ ಮನವಿ ಮಾಡಿದ್ದ ಅವರು, ನೆರೆ ನೀರು ಬೀದಿ ಹಾಗೂ ಮನೆಗಳಿಗೆ ನುಗ್ಗುತ್ತಿರುವುದು ಜನರಿಗೆ ದುಃಸ್ವಪ್ನದ ಅನುಭವ ನೀಡುತ್ತಿದೆ. ಹಸಿರು ಪೀಠದ ನಿರ್ದೇಶನವನ್ನು ಸರಕಾರ ಅನುಸರಿಸುತ್ತಿಲ್ಲ ಎಂದಿದ್ದರು.

ಮೋಡ ಸ್ಫೋಟದಿಂದ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನೆರೆ ಉದ್ಭವಿಸಿದೆ ಎಂಬ ರಾಜ್ಯ ಸರಕಾರದ ವಕೀಲರ ಪ್ರಪಾದನೆಯನ್ನು ಪೀಠ ನಿರಾಕರಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News