ಜೆಎನ್ ಯು, ಸೈಂಟ್ ಸ್ಟೀಫನ್ಸ್ ಕಾಲೇಜು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗುಂಪು
ಹೊಸದಿಲ್ಲಿ, ಆ.18: ಜೆ.ಎನ್.ಯು. ಹಾಗೂ ಸೈಂಟ್ ಸ್ಟೀಫನ್ಸ್ ಕಾಲೇಜಿನ ಏಳು ವಿದ್ಯಾರ್ಥಿಗಳ ಮೇಲೆ ಫರೀದಾಬಾದ್ ನಗರದಲ್ಲಿ ಸೋಮವಾರ ತಂಡವೊಂದು ಹಲ್ಲೆ ನಡೆಸಿದೆ.
ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ಯುವತಿಯೊಬ್ಬಳು ಮೇಲೆ ದುಷ್ಕರ್ಮಿಗಳು ಅತ್ಯಾಚಾರಕ್ಕೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ದೌರ್ಜನ್ಯವೆಸಗಿದ್ದಾರೆನ್ನಲಾಗಿದೆ.
ಸಂತ್ರಸ್ತ ವಿದ್ಯಾರ್ಥಿಗಳು ಸೂರಜ್‌ಕುಂಡ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೂ ಪೊಲೀಸರು ಅವರೊಡನೆ ಕೆಟ್ಟದ್ದಾಗಿ ನಡೆದುಕೊಂಡು ಎಫೈಆರ್ ದಾಖಲಿಸಲು ನಿರಾಕರಿಸಿದರೆನ್ನಲಾಗಿದೆ. ಕೊನೆಗೆ ಉಪಾಯವಿಲ್ಲದೆ ವಿದ್ಯಾರ್ಥಿಗಳು ಆಗಸ್ಟ್ 15ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ನಂತರ ಪ್ರಕರಣವನ್ನು ಸೂರಜ್‌ಕುಂಡ್ ಠಾಣೆಗೆ ವರ್ಗಾಯಿಸಲಾಗಿದೆ.
‘‘ನಾನು ಮತ್ತು ನನ್ನ ಸ್ನೇಹಿತರು ಅಸೋಲಾ ವನ್ಯಪ್ರಾಣಿ ಧಾಮಕ್ಕೆ ಭಾರದ್ವಾಜ್ ಕೆರೆಯ ಅನ್ವೇಷಣೆಗಾಗಿ ಹೋಗಿದ್ದು, ಅಲ್ಲಿಂದ ರಾತ್ರಿ 8:30ಕ್ಕೆ ಹಿಂದಿರುಗಬೇಕೆಂದುಕೊಂಡಾಗ ಮೂವರು ನಮ್ಮನ್ನು ತಡೆದು ಹುಡುಗಿಯೊಂದಿಗೆ ನೀವಿಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಹಲ್ಲೆಗೈದಿದ್ದರು. ದುಷ್ಕರ್ಮಿಗಳ ಗುಂಪಿಗೆ ಇನ್ನಷ್ಟು ಮಂದಿ ಸೇರಿಕೊಂಡು ಕೋಲುಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿ ಮತೀಯ ದ್ವೇಷ ಸೂಸುವ ನಿಂದನೆಗಳನ್ನೂ ಮಾಡಿದರು’’ ಎಂದು ಸಂತ್ರಸ್ತ ವಿದ್ಯಾರ್ಥಿಯೊಬ್ಬ ವಿವರಿಸಿದ್ದಾನೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲೂ ಅವರು ಯತ್ನಿಸಿದರೆನ್ನಲಾಗಿದ್ದು ವಿದ್ಯಾರ್ಥಿಗಳ ಗುರುತು ಪತ್ರ ತೋರಿಸುವಂತೆ ಹೇಳಿ ಅವರ ಮೊಬೈಲ್ ಫೋನುಗಳನ್ನು ಒಡೆದು ಹಾಕಿದ್ದಾರೆ. ವಿದ್ಯಾರ್ಥಿನಿಯ ಎದೆ, ಹೊಟ್ಟೆ, ಬಲಕಾಲು ಹಾಗೂ ಮೊಣಕಾಲುಗಳಿಗೆ ಅವರು ಗಾಯಗಳುಂಟು ಮಾಡಿದ್ದು, ವಿದ್ಯಾರ್ಥಿಗಳನ್ನೆಲ್ಲಾ ಕೊಂದು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದಾಗಿಯೂ ಬೆದರಿಸಿದ್ದರು ಎಂದು ಸಂತ್ರಸ್ತರು ಹೇಳಿದ್ದಾರೆ.
ಒಬ್ಬ ವಿದ್ಯಾರ್ಥಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದು, ಆತನಿಗೆ ಗಡ್ಡವಿರುವುದನ್ನು ನೋಡಿ ಚೆನ್ನಾಗಿ ಥಳಿಸಲಾಯಿತೆಂದೂ ಆರೋಪಿಸಲಾಗಿದೆ. ಇಬ್ಬರು ಸ್ಥಳೀಯರು ವಿದ್ಯಾರ್ಥಿಗಳ ಸಹಾಯಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದರು.
ಸೂರಜ್‌ಕುಂಡ್ ಠಾಣೆಗೆ ಆರಂಭದಲ್ಲಿ ವಿದ್ಯಾರ್ಥಿಗಳು ಹೋದಾಗ ಅವರ ಹರಿದ ಬಟ್ಟೆಗಳನ್ನು ನೋಡಿ ‘‘ಇದು ಫ್ರೀ ಸೆಕ್ಸ್ ದೇಶವಲ್ಲ’’ ಎಂದು ಪೊಲೀಸರು ನಿಂದಿಸಿದ್ದರೆನ್ನಲಾಗಿದೆ.
ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.