ವಾಹನ ಸಾರಿಗೆ ಕಾರ್ಮಿಕ ಕಾಯ್ದೆ ಉಲ್ಲಂಘನೆ: ಉದ್ಯಮಿ ವಿಲಾಸ್ ನಾಯಕ್‌ಗೆ ದಂಡ

Update: 2017-08-18 12:41 GMT

ಉಡುಪಿ, ಆ.18: ಮೋಟಾರು ವಾಹನ ಸಾರಿಗೆ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿದ ಉಡುಪಿ ಚಿಟ್ಪಾಡಿಯ ಹನುಮಾನ್ ಟ್ರಾನ್ಸ್‌ಪೋರ್ಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿಲಾಸ್ ನಾಯಕ್‌ಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿಲಾಸ್ ನಾಯಕ್ ಮೋಟಾರು ಸಾರಿಗೆ ಉದ್ಯಮದ ನಮೂನೆ 11ರಲ್ಲಿ ಹೆಚ್ಚುವರಿ ಕೆಲಸದ ಹಾಜರಾತಿ ಪುಸ್ತಕವನ್ನು ನಿರ್ವಹಿಸಿ, ಅದರಲ್ಲಿ ಶಶಿಧರ ಬಿ.ಎಚ್. ಎಂಬವರು ಮಾಡಿದ ಹೆಚ್ಚುವರಿ ಕೆಲಸದ ಬಗ್ಗೆ ನಮೂದಿಸದೆ ಇದ್ದು, ಈ ಸಂಬಂಧ ಉದ್ದಿಮೆಗೆ ಭೇಟಿ ನೀಡಿದ ಕಾರ್ಮಿಕ ಅಧಿಕಾರಿಗಳಾದ ಆನಂದ ಮೂರ್ತಿ ಮತ್ತು ರಾಜೇಶ್ ಯಾದವ್‌ಗೆ ಕಂಟ್ರೋಲ್ ಪುಸ್ತಕ ಮತ್ತು ಕಾಂಪನ್ ಸೇಟರಿ ರಜೆಯ ಪುಸ್ತಕವನ್ನು ತಪಾಸಣೆಗೆ ನೀಡದೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ 2010ರ ಜೂ.2ರಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣವು ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಪ್ರಕರಣದ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಮತ್ತು ವಾದ ವಿವಾದವನ್ನು ಆಲಿಸಿ ಆರೋಪವು ಸಾಬೀತಾಗಿದೆ ಎಂದು ತೀರ್ಮಾನಿಸಿ ಮೋಟಾರು ವಾಹನ ಸಾರಿಗೆ ಕಾರ್ಮಿಕ ಕಾಯ್ದೆಯ ಕಲಂ.32 ರಡಿ 500 ರೂ. ದಂಡ ಶಿಕ್ಷೆ ವಿಧಿಸಿ ಜು.27ರಂದು ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮುಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News