ನಾರಾಯಣ ಮೂರ್ತಿ ವಿರುದ್ಧ ಇನ್ಫೋಸಿಸ್ ಕಿಡಿ
ಹೊಸದಿಲ್ಲಿ,ಆ.18: ಸಿಕ್ಕಾ ರಾಜೀನಾಮೆಯ ಬೆನ್ನಲ್ಲೇ ಇನ್ಫೋಸಿಸ್‌ನ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ವಿರುದ್ಧ ಶುಕ್ರವಾರ ತೀವ್ರವಾದ ವಾಗ್ದಾಳಿ ನಡೆಸಿದೆ. ನಾರಾಯಣ ಮೂರ್ತಿಯವರು ಸಂಸ್ಥೆಯ ಮುಂದೆ ಕೆಲವು ನ್ಯಾಯಯುತವಲ್ಲದ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಆಡಳಿತ ಮಂಡಳಿಯಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿದ್ದರು ಇಲ್ಲದಿದ್ದಲ್ಲಿ ಸಂಸ್ಥೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಾಗಿ ಬೆದರಿಕೆಹಾಕಿದ್ದರು ಎಂದು ಆಡಳಿತ ಮಂಡಳಿ ಆರೋಪಿಸಿದೆ.
ಇನ್ಫೋಸಿಸ್‌ನ ಆಡಳಿತ ಮಂಡಳಿಯಲ್ಲಿ ನಡೆದಿದೆಯೆನ್ನಲಾದ ಪ್ರಮಾದಗಳ ಬಗ್ಗೆ ನಿಷ್ಪಕ್ಷಪಾತವಾದ ಹಾಗೂ ಉದ್ದೇಶಭರಿತವಾದ ತನಿಖೆ ನಡೆದಿಲ್ಲವೆಂದು ತನಗೆ ಹಲವಾರು ಶೇರುದಾರರು ತಿಳಿಸಿದ್ದಾರೆಂದು ನಾರಾಯಣಮೂರ್ತಿ ಹೇಳಿಕೆ ನೀಡಿದ ಬೆನ್ನಲ್ಲೇ ಕಂಪೆನಿಯ ಆಡಳಿತ ಮಂಡಳಿ ಈ ಪ್ರತಿಕ್ರಿಯೆ ನೀಡಿದೆ.
ನಾರಾಯಣ ಮೂರ್ತಿಯವರ ಆರೋಪಗಳನ್ನು ನಿರಾಕರಿಸಿರುವ ಇನ್ಫೋಸಿಸ್ ಅಧ್ಯಕ್ಷ ಆರ್.ಶೇಷಶಾಯಿ ಅವರು ವಿಶ್ವವಿಖ್ಯಾತ ಕಾನೂನುಸಂಸ್ಥೆಗಳಿಂದ ತನಿಖೆಯನ್ನು ನಡೆಸಲಾಗಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ, ನಡೆಸಿದ ವೈಯಕ್ತಿಕ ತೇಜೋವಧೆಯಿಂದ ನೊಂದು ಸಿಕ್ಕಾ ಅವರು ರಾಜೀನಾಮೆ ನೀಡಿರುವುದಾಗಿ ಆಡಳಿತ ಮಂಡಳಿ ಆರೋಪಿಸಿತ್ತು.
ಮ್ಯಾನೇಜ್‌ಮೆಂಟ್ ಸಂಭಾವನೆಗೆ ಸಂಬಂಧಿಸಿದಂತೆ ಮತಚಲಾವಣೆಯಾದಾಗ ನಾರಾಯಣ ಮೂರ್ತಿಯವರು ಇತರ ಶೇರುದಾರರಿಗಿಂತ ಮೇಲುಗೈ ಸಾಧಿಸಲು ಯತ್ನಿಸಿದ್ದರೆಂದು ಆಡಳಿತ ಮಂಡಳಿ ಆರೋಪಿಸಿದೆ.
ಇನ್ಫೋಸಿಸ್‌ಗೆ ಮತ್ತೆ ನಿಲೇಕಣಿ
ಇನ್ಫೋಸಿಸ್ ಸಿಇಓ ವಿಶಾಲ್ ಸಿಕ್ಕಾ ನಿರ್ಗಮನದ ಬೆನ್ನಲ್ಲೇ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿದ್ದ ನಂದನ್ ನಿಲೇಕಣಿಯವರನ್ನು ಮರಳಿ ಸಂಸ್ಥೆಗೆ ಕರೆತಂದು ಅವರನ್ನು ಕಾರ್ಯನಿರ್ವಹಣೇತರ ಅಧ್ಯಕ್ಷರಾಗಿ ನೇಮಿಸಬೇಕೆಂದು ಹೂಡಿಎದಾರ ಸಲಹೆ ಸಂಸ್ಥೆಯೊಂದು ಆಡಳಿತ ಮಂಡಳಿಗೆ ಸಲಹೆ ಮಾಡಿದೆ.