ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿಲ್ಲ: ಕಂಪೆನಿ

Update: 2017-08-18 17:39 GMT

ಗೋರಖ್‌ಪುರ, ಆ. 18: ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದ್ರವೀಕೃತ ಆಮ್ಲಜನಕ ಪೂರೈಕೆ ನಿಲ್ಲಿಸಿರುವುದರಿಂದ ಮಕ್ಕಳ ಸಾವಿನ ಹೊಣೆ ಹೊರಬೇಕೆಂಬ ನ್ಯಾಯಾಂಗ ವರದಿಯನ್ನು ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ನಿರಾಕರಿಸಿದೆ.

ನಾವು ಆಮ್ಲಜನಕ ಪೂರೈಕೆ ನಿಲ್ಲಿಸಲಿಲ್ಲ. ಆದರೆ, ಬಾಕಿ ಇರುವ ಮೊತ್ತ ಪಾವತಿಸುವಂತೆ ಒತ್ತಡ ಹೇರಿದ್ದೇವೆ ಎಂದು ಪುಷ್ಪಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಹೇಳಿದೆ. ನನ್ನ ಹೇಳಿಕೆ ದೃಢೀಕರಿಸಲು ಸರಕಾರಕ್ಕೆ ಪುರಾವೆಗಳನ್ನು ಸಲ್ಲಿಸಲು ನಾನು ಬಯಸಿದ್ದೆ ಎಂದು ಕಂಪೆನಿ ಮಾಲಕ ಮನೀಶ್ ಭಂಡಾರಿ ಹೇಳಿದ್ದಾರೆ.

ಅವರು ನ್ಯಾಯಾಂಗ ವರದಿ ಸಲ್ಲಿಸಿದ್ದರೆ, ನಾವು ಕೂಡ ನಮ್ಮ ಪುರಾವೆ ಸಲ್ಲಿಸಲಿದ್ದೇವೆ. ನಾವು ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ನಾವು ಅದನ್ನು ಸಾಬೀತು ಮಾಡಲಿದ್ದೇವೆ ಎಂದು ಭಂಡಾರಿ ಹೇಳಿದ್ದಾರೆ.

ಉತ್ತರಪ್ರದೇಶ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಗೋರಖ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ, ಪುಷ್ಪಾ ಸೇಲ್ಸ್ ಜೀವ ಉಳಿಸುವ ಉದ್ಯಮದಲ್ಲಿ ತೊಡಗಿಕೊಂಡಿರುವುದರಿಂದ ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಬಾರದಿತ್ತು ಎಂದಿದ್ದರು.

 ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿಯತ್ತ ವರ್ಗಾಯಿಸಿರುವ ಭಂಡಾರಿ, ಆಮ್ಲಜನಕ ಸಿಲಿಂಡರ್‌ಗಳ ದಾಸ್ತಾನು ನಿರ್ವಹಿಸುವುದು ಆಸ್ಪತ್ರೆ ಜವಾಬ್ದಾರಿ. ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ ಪೂರೈಸಲು ಇನ್ನೊಂದು ಸಂಸ್ಥೆ ಕೂಡ ಗುತ್ತಿಗೆ ಪಡೆದುಕೊಂಡಿದೆ ಎಂದಿದ್ದಾರೆ.

 ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಉಂಟಾಗಲು ಭ್ರಷ್ಟಾಚಾರವೇ ಕಾರಣ ಎಂದು ಮನೀಶ್ ಭಂಡಾರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News