×
Ad

‘ಕಾಲ್‌ಡ್ರಾಪ್ ಸಮಸ್ಯೆ’ ನಿಗ್ರಹಿಸಲು ಕಠಿಣ ಸೂತ್ರ

Update: 2017-08-18 22:22 IST

ಹೊಸದಿಲ್ಲಿ, ಆ.18: ‘ಕಾಲ್ ಡ್ರಾಪ್’ ಸಮಸ್ಯೆ ನಿಗ್ರಹಿಸಲು ಕಟ್ಟುನಿಟ್ಟಾದ ಮಾರ್ಗದರ್ಶಿ ಸೂತ್ರವನ್ನು ಜಾರಿಗೊಳಿಸಿರುವ ‘ಟ್ರಾಯ್’ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ), ಸತತ ಮೂರು ತ್ರೈಮಾಸಿಕದಲ್ಲಿ ಈ ಮಾನದಂಡವನ್ನು ಪಾಲಿಸಲು ವಿಫಲವಾದ ಟೆಲಿಕಾಂ ಸಂಸ್ಥೆಯ ಮೇಲೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

  ನೆಟ್‌ವರ್ಕ್ ಕೆಲಸ ನಿರ್ವಹಣೆಯ ಆಧಾರದಲ್ಲಿ 1ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಶ್ರೇಣೀಕೃತ ದಂಡ ವ್ಯವಸ್ಥೆಯನ್ನು ಮಾರ್ಗದರ್ಶಿ ಸೂತ್ರದಲ್ಲಿ ಪ್ರಸ್ತಾಪಿಸಿದ್ದೇವೆ ಎಂದು ‘ಟ್ರಾಯ್’ ಅಧ್ಯಕ್ಷ ಆರ್.ಎಸ್.ಶರ್ಮ ಸುದ್ದಿಗಾರರಿಗೆ ತಿಳಿಸಿದರು.

  ಟೆಲಿಕಾಂ ಸಂಸ್ಥೆಯು ಕಾಲ್‌ಡ್ರಾಪ್ ಮಾನದಂಡವನ್ನು ಪಾಲಿಸಲು ಸತತ ತ್ರೈಮಾಸಿಕ ಅವಧಿಯಲ್ಲಿ ವಿಫಲವಾದರೆ ದಂಡದ ಮೊತ್ತವು 1.5ರಷ್ಟು ಹೆಚ್ಚಲಿದೆ, ಮೂರನೇ ತ್ರೈಮಾಸಿಕ ಅವಧಿಯಲ್ಲೂ ವಿಫಲವಾದರೆ ದಂಡದ ಮೊತ್ತ ದ್ವಿಗುಣಗೊಳ್ಳಲಿದೆ. ಆದರೆ ದಂಡದ ಮೊತ್ತ ಗರಿಷ್ಟ 10 ಲಕ್ಷ ರೂ.ಗೆ ಸಂಇತವಾಗಿರುತ್ತದೆ ಎಂದು ‘ಟ್ರಾಯ್’ನ ಪ್ರಬಾರ ಕಾರ್ಯದರ್ಶಿ ಎಸ್.ಕೆ.ಗುಪ್ತ ತಿಳಿಸಿದ್ದಾರೆ. ಈ ಹಿಂದಿನ ಮಾರ್ಗದರ್ಶಿ ಸೂತ್ರದಲ್ಲಿ ನಿಯಮ ಉಲ್ಲಂಘಿಸಿದರೆ 50,000 ರೂ. ದಂಡ ವಿಧಿಸಲಾಗುತ್ತಿತ್ತು.

 ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಟೆಲಿಕಾಂ ಸಂಸ್ಥೆಗಳು ನಿರ್ವಹಿಸುವ ಕರೆಯಲ್ಲಿ ಶೇ.2ಕ್ಕಿಂತ ಹೆಚ್ಚಿನ ಕರೆಗಳು ‘ಡ್ರಾಪ್’ ಆಗುವಂತಿಲ್ಲ. ಒತ್ತಡ ಅವಧಿ(ಬ್ಯುಸಿ ಟೈಮ್)ಯಲ್ಲಿ ಶೇ.3ರಷ್ಟು ಕರೆಗಳು ‘ಡ್ರಾಪ್’ ಆಗಬಹುದು. ಅಲ್ಲದೆ ‘ರೇಡಿಯೋ ಲಿಂಕ್ ಟೈಮ್‌ಔಟ್ ಟೆಕ್ನಾಲಜಿ (ಆರ್‌ಎಲ್‌ಟಿ) ಬಗ್ಗೆಯೂ ಮಾರ್ಗದರ್ಶಿ ಸೂತ್ರದಲ್ಲಿ ವಿವರಿಸಲಾಗಿದೆ. ಮೊಬೈಲ್ ಗ್ರಾಹಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುವ ಸಂದರ್ಭ (ಒಂದು ಮೊಬೈಲ್ ಟವರ್‌ನಿಂದ ಇನ್ನೊಂದು ಮೊಬೈಲ್ ಟವರ್‌ಗೆ) ಕರೆಯನ್ನು ಮುಂದುವರಿಸಿಕೊಂಡು ಹೋಗಲು ಆರ್‌ಎಲ್‌ಟಿ ಸೌಲಭ್ಯ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News