ಅಕ್ರಮ ದಂಧೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ

Update: 2017-08-19 09:46 GMT

ಉಡುಪಿ, ಆ.19: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಮಟ್ಕಾ ಜುಗಾರಿಗೆ ಸಂಬಂಧಿಸಿದಂತೆ 134 ಹಾಗೂ ಈ ವರ್ಷ ಜು.31ರವರೆಗೆ 126 ಪ್ರಕರಣಗಳು ದಾಖಲಾಗಿವೆ. ಆದರೆ ಇದು ತೃಪ್ತಿದಾಯಕವಾಗಿಲ್ಲ. ಇನ್ನಷ್ಟು ಕ್ರಮ ಇದರ ವಿರುದ್ಧ ತೆಗೆದುಕೊಳ್ಳಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ಆರಂಭಗೊಂಡ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಮಾತನಾಡುತಿದ್ದರು.

ಕೋಟ ಪೊಲೀಸ್ ಠಾಣೆಯಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದು, ಇದರಲ್ಲಿ ಅಲ್ಲಿನ ಸಿಬ್ಬಂದಿಯೊಬ್ಬರು ಶಾಮೀಲಾಗಿದ್ದಾರೆ. ಅವರನ್ನು ಈ ಠಾಣೆಯಿಂದ ಬೇರೆ ಕಡೆ ವರ್ಗಾಯಿಸಿ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ದೂರಿದರು. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು.

ಸಾಮಾಜಿಕ ಅನಿಷ್ಠಗಳಾದ ಮಟ್ಕಾ, ಜೂಜಾಟ, ಅಕ್ರಮ ಸಾರಾಯಿ ಮಾರಾಟಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದಿದ್ದು, ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಆಯಾ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗುವುದು. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ್ಯ ಅಥವಾ ಸಿಬ್ಬಂದಿಗಳೇ ಶಾಮೀಲಾಗಿರುವುದು ತಿಳಿದುಬಂದರೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದರು.

ಕಟಪಾಡಿ ನಿವಾಸಿಯೋರ್ವರು ಕರೆ ಮಾಡಿ ಕಟಪಾಡಿ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಹಾಗೂ ಬಸ್‌ಗಳ ವೇಗಕ್ಕೆ ಮಿತಿ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಅತಿವೇಗದ ಚಲಾವಣೆ, ಕರ್ಕಶ ಹಾರ್ನ್ ಹಾಗೂ ಶಾಲಾ ಮಕ್ಕಳು ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುವುದಕ್ಕೆ ಕಡಿವಾಣ ಹಾಕುವಂತೆ ಬಸ್ ಮಾಲಕರಿಗೆ ಈಗಾಗಲೇ ನಿರ್ದೇಶನ ನೀಡ ಲಾಗಿದೆ. ಈ ಕುರಿತು ನಿಯಮ ಉಲ್ಲಂಘಿಸಿದ ಬಸ್‌ಗಳಿಗೆ ಸೋಮವಾರ ದಿಂದ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದರು.

ಪ್ರಯಾಣಿಕರು ಬಸ್‌ನಿಂದ ಹತ್ತುವಾಗ ಅಥವಾ ಇಳಿಯುವಾಗ ಓಮ್ಮೇಲೆ ಚಲಾಯಿಸಿಕೊಂಡು ಹೋಗುವ ಬಸ್‌ಗಳ ನಂಬರ್‌ನ್ನು ಸಾರ್ವಜನಿಕರು ಎಸ್‌ಎಂಎಸ್ ಮೂಲಕ ಕಳುಹಿಸಿದರೂ ಅಂತಹ ಬಸ್‌ಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಸ್‌ಗಳ ಕರ್ಕಶ ಹಾನ್‌ಗಳಿಂದ ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿ ಯರಿಗೆ ತೊಂದರೆಯಾಗುತ್ತಿದೆ ಎಂದು ಮಣಿಪಾಲದ ವ್ಯಕ್ತಿಯೋರ್ವರ ದೂರಿಗೆ ಪ್ರತಿಕ್ರಿಯಿಸಿದ ಅವರು, ಆದ್ಯತೆ ಮೇರೆಗೆ ಇದರ ವಿರುದ್ಧ ಕ್ರಮ ತೆಗೆದು ಕೊಂಡು ಒಂದು ವಾರಗಳಲ್ಲಿ ಪರಿಣಾಮ ತೋರಿಸುತ್ತೇವೆ ಎಂದು ಹೇಳಿದರು.

ಬೆಳಗ್ಗೆ 10ಗಂಟೆಯಿಂದ 11ಗಂಟೆಯವರೆಗೆ ನಡೆದ ಫೋನ್ ಇನ್ ಕಾರ್ಯ ಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 27 ಕರೆಗಳು ಬಂದಿದ್ದು, ಇವುಗಳಲ್ಲಿ ಮರಳು ಮಾಫಿಯಾ, ಸಂಚಾರ ಸಮಸ್ಯೆ, ಆಟೋ ರಿಕ್ಷಾ ಚಾಲಕ ದುವರ್ತನೆ, ಕುಡುಕರ ಕಿರುಕುಳ, ರಸ್ತೆ ಅತಿಕ್ರಮಣ, ಬಸ್‌ಗಳ ವೇಗ, ಕರ್ಕಶ ಹಾನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರು ದೂರಿದರು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಡಿಸಿಐಬಿ ಇನ್ಸ್ ಪೆಕ್ಟರ್ ಸಂಪತ್‌ಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಶಿಕ್ಷಕಿ ಕರೆಗೆ ಉಪನ್ಯಾಸ ನೀಡಲು ಒಪ್ಪಿದ ಎಸ್ಪಿ!

ಕಲ್ಯಾಣಪುರ ಡಾ.ಟಿ.ಎಂ.ಎ.ಪೈ ಶಾಲೆಯ ಶಿಕ್ಷಕಿಯೊಬ್ಬರು ಕರೆ ಮಾಡಿ, ಎಂಟನೆ ತರಗತಿಯ ಮಕ್ಕಳಿಗೆ ಕಾನೂನು ಕುರಿತು ಪಾಠ ನಡೆಯುತ್ತಿದ್ದು, ಮಕ್ಕಳಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ಫೋನ್‌ನಲ್ಲಿ ಮಾಹಿತಿ ನೀಡುವಂತೆ ವಿನಂತಿಸಿಕೊಂಡರು.

ಅದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಸಂಜೀವ ಪಾಟೀಲ್, ಇದನ್ನು ಫೋನ್‌ನಲ್ಲಿ ಹೇಳಿದರೆ ಸಮಯ ಸಾಕಾಗುವುದಿಲ್ಲ. ನೀವು ಸಮಯ ನೀಡಿದರೆ ಫೋನ್ ಇನ್ ಕಾರ್ಯಕ್ರಮ ಮುಗಿದ ಬಳಿಕ ಶಾಲೆಗೆ ಬಂದು ಮಕ್ಕಳಿಗೆ ಈ ಕುರಿತು ಅರ್ಧ ಗಂಟೆ ಉಪನ್ಯಾಸ ನೀಡುತ್ತೇನೆ ಎಂದು ಹೇಳಿದರು. ಅದಕ್ಕೆ ಶಿಕ್ಷಕಿ ಸಂತೋಷದಿಂದ ಒಪ್ಪಿಕೊಂಡು ಶಾಲೆಗೆ ಬರುವಂತೆ ಆಹ್ವಾನ ನೀಡಿದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News