ಫಿನ್‌ಲ್ಯಾಂಡ್: ಸರಣಿ ಚೂರಿ ದಾಳಿ; 2 ಬಲಿ

Update: 2017-08-19 15:13 GMT

ಹೆಲ್ಸಿಂಕಿ (ಫಿನ್‌ಲ್ಯಾಂಡ್), ಆ. 19: ಫಿನ್‌ಲ್ಯಾಂಡ್ ದೇಶದ ಟುರ್ಕು ಎಂಬ ನಗರದಲ್ಲಿ ಶುಕ್ರವಾರ ನಡೆದ ಸರಣಿ ಚೂರಿ ಇರಿತ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘‘ಸರಣಿ ಇರಿತ ಘಟನೆಗಳಲ್ಲಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ’’ ಎಂದು ಮಾರುಕಟ್ಟೆ ಚೌಕವೊಂದರಲ್ಲಿ ನಡೆದ ದಾಳಿಯ ಬಳಿಕ ಟುರ್ಕು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪೊಲೀಸರು ಓರ್ವ ಶಂಕಿತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ‘‘ಇತರ ಸಂಭಾವ್ಯ ಆರೋಪಿಗಳಿಗಾಗಿ ಪೊಲಿಸರು ಹುಡುಕಾಡುತ್ತಿದ್ದಾರೆ’’ ಎಂದು ಟ್ವೀಟ್ ಹೇಳಿದೆ.

ಸ್ಪೇನ್‌ನಲ್ಲಿ ದುಷ್ಕರ್ಮಿಗಳು ಪಾದಚಾರಿಗಳ ಮೇಲೆ ವಾಹನಗಳನ್ನು ಹರಿಸಿ ನಡೆಸಿರುವ ಎರಡು ದಾಳಿಗಳು ವರದಿಯಾದ ಬಳಿಕ ಫಿನ್‌ಲ್ಯಾಂಡ್‌ನಲ್ಲಿ ಸರಣಿ ಚೂರಿ ಇರಿತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಯುರೋಪ್ ಕಟ್ಟೆಚ್ಚರದಲ್ಲಿದೆ.

ರಶ್ಯದಲ್ಲೂ ಸರಣಿ ಚೂರಿ ಇರಿತ: 8 ಮಂದಿಗೆ ಗಾಯ

ರಶ್ಯದ ಪೂರ್ವದ ನಗರ ಸುರ್ಗುಟ್‌ನ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಚೂರಿಯಿಂದ ದಾಳಿ ನಡೆಸಿ ಎಂಟು ಮಂದಿಯನ್ನು ಗಾಯಗೊಳಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಗುಂಡು ಹಾರಿಸಿ ಕೊಂದರು ಎಂದು ಪೊಲೀಸರು ಶನಿವಾರ ತಿಳಿಸಿದರು.

ಸ್ಥಳೀಯ ಸಮಯ 11:20ರ ಸುಮಾರಿಗೆ ನಗರದ ಮಧ್ಯ ಭಾಗದ ರಸ್ತೆಗಳಲ್ಲಿ ನಡೆದುಕೊಂಡು ಹೋದ ವ್ಯಕ್ತಿಯು ಹಲವು ದಾರಿಹೋಕರಿಗೆ ಚೂರಿಯಿಂದ ಇರಿದನು ಎಂದು ಪೊಲೀಸರು ಹೇಳಿದರು.

ಬಳಿಕ ಸ್ಥಳಕ್ಕೆ ಬಂದ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿ ಸಾಯಿಸಿದರು ಎಂದರು.

ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News