45 ಲ.ರೂ.ಮೌಲ್ಯದ ವಜ್ರಗಳನ್ನು ಮರಳಿಸಿದ ಕಾವಲುಗಾರನ ಪುತ್ರ

Update: 2017-08-19 16:48 GMT

ಸೂರತ್,ಆ.19: 45 ಲಕ್ಷ ರೂ.ಮೌಲ್ಯದ ವಜ್ರಗಳಿದ್ದ ಚೀಲವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಕ್ಕಾಗಿ ಸೂರತ್ ವಜ್ರ ವ್ಯಾಪಾರಿಗಳ ಸಂಘವು ಶನಿವಾರ 15ರ ಹರೆಯದ ಬಾಲಕ ವಿಶಾಲ ಉಪಾಧ್ಯಾಯ ಮತ್ತು ಆತನ ತಂದೆ, ವೃತ್ತಿಯಲ್ಲಿ ಕಾವಲುಗಾರನಾಗಿರುವ ಫೂಲ್‌ಚಂದ್ ಅವರನ್ನು ಸನ್ಮಾನಿಸಿತು.

ವಜ್ರಗಳ ಏಜೆಂಟ್ ಆಗಿರುವ ಮನ್ಸುಖ್‌ಭಾಯಿ ಸಾವಲಿಯಾ ಅವರು ಕಳೆದ ರವಿವಾರ ಸೇಫ್ ಡಿಪಾಸಿಟ್ ವಾಲ್ಟ್‌ನಿಂದ ವಜ್ರಗಳ ಪ್ಯಾಕೆಟ್‌ಗಳನ್ನು ಪಡೆದುಕೊಂಡು ಹೋಗುತ್ತಿದ್ದಾಗ 45 ಲ.ರೂ.ವೌಲ್ಯದ ವಜ್ರಗಳಿದ್ದ ಒಂದು ಪ್ಯಾಕೆಟ್ ಅವರ ಜೇಬಿನಿಂದ ಜಾರಿ ಕೆಳಕ್ಕೆ ಬಿದ್ದಿತ್ತು. ಅಲ್ಲಿಯೇ ಸಮೀಪದಲ್ಲಿ ಕ್ರಿಕೆಟ್ ಆಡುತ್ತಿದ್ದ ವಿಶಾಲಸ್ವಲ್ಪ ಹೊತ್ತಿನ ಬಳಿಕ ಅದನ್ನು ಗಮನಿಸಿದ್ದ. ಅದನ್ನಾತ ಎತ್ತಿಕೊಂಡು ಮನೆಗೊಯ್ದು ಪೂಲ್‌ಚಂದ್‌ಗೆ ನೀಡಿದ್ದ. ಅದನ್ನು ತೆರೆದು ನೋಡಿದಾಗ ಲಕ್ಷಾಂತರ ರೂ.ಗಳ ವಜ್ರಗಳು ಇದ್ದವಾದರೂ ತಂದೆ-ಮಗ ಯಾವುದೇ ಲೋಭಕ್ಕೆ ಸಿಲುಕಿರಲಿಲ್ಲ.

 ಸೋಮವಾರ ಮತ್ತು ಮಂಗಳವಾರ ಸ್ವಾತಂತ್ರೋತ್ಸವ ಪ್ರಯುಕ್ತ ವಜ್ರದ ಮಾರುಕಟ್ಟೆಗೆ ರಜೆಯಿತ್ತು. ಬುಧವಾರ ಬೆಳಿಗ್ಗೆ ವಜ್ರದ ವ್ಯಾಪಾರಿಗಳ ಸಂಘದ ಕಚೇರಿಗೆ ತೆರಳಿದ್ದ ಫೂಲ್‌ಚಂದ್ ವಜ್ರಗಳಿದ್ದ ಚೀಲವನ್ನು ಒಪ್ಪಿಸಿದ್ದರು.

ತನ್ಮಧ್ಯೆ ಸಾವಲಿಯಾ ಕಳೆದು ಹೋಗಿದ್ದ ವಜ್ರಗಳಿಗಾಗಿ ಹುಡುಕಾಡಿ ಹೈರಾಣಾ ಗಿದ್ದರು. ಪ್ರದೇಶದಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದರಾದರೂ ರಜೆಯಿದ್ದು ದರಿಂದ ಸೇಫ್ ಡಿಪಾಸಿಟ್ ವಾಲ್ಟ್‌ನ ಸಿಸಿಟಿವಿ ಫೂಟೇಜ್ ಪರಿಶೀಲಿಸಲು ಸಾಧ್ಯವಾಗಿ ರಲಿಲ್ಲ.

ಬುಧವಾರ ವಾಲ್ಟ್ ಆರಂಭಗೊಂಡಾಗ ಸಂಘದ ಅಧಿಕಾರಿಗಳು ಅಲ್ಲಿಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ವಜ್ರಗಳನ್ನು ಕಳೆದುಕೊಂಡಿದ್ದು ಸಾವಲಿಯಾ ಎನ್ನುವುದನ್ನು ಪತ್ತೆ ಹಚ್ಚಿದ್ದರು. ಕ್ರಿಕೆಟ್ ಆಡುತ್ತಿದ್ದ ಬಾಲಕನೋರ್ವ ವಜ್ರದ ಚೀಲವನ್ನು ಎತ್ತಿಕೊಂಡ ದೃಶ್ಯವೂ ಅದರಲ್ಲಿತ್ತು.

ವಿಶಾಲನ ಪ್ರಾಮಾಣಿಕತೆಯನ್ನು ಮೆಚ್ಚಿದ ಸಂಘವು ಬಹುಮಾನದ ಅಂಗವಾಗಿ ಆತನ ಒಂದು ವರ್ಷದ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News