ಸರಕಾರ ನಿರ್ಮಿತ ರಾಷ್ಟ್ರೀಯ ದುರಂತ: ರಾಹುಲ್ ಗಾಂಧಿ
ಗೋರಖ್‌ಪುರ್, ಆ. 19: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಗೋರಖ್‌ಪುರಕ್ಕೆ ಭೇಟಿ ನೀಡಿದ್ದು, ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಮಕ್ಕಳ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ನೀಡಿದರು.
70ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿರುವುದನ್ನು ಸರಕಾರ ನಿರ್ಮಿತ ರಾಷ್ಟ್ರೀಯ ದುರಂತ ಎಂದು ಹೇಳಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯವನ್ನು ಮುಚ್ಚಿ ಹಾಕಬಾರದು ಎಂದಿದ್ದಾರೆ.
ನಾನು ಭೇಟಿಯಾದವರೆಲ್ಲ ಮಗುವಿನ ಸಾವಿಗೆ ಆಮ್ಲಜನಕ ಕೊರತೆ ಕಾರಣ ಎಂದು ಹೇಳಿದ್ದಾರೆ. ಹಲವು ಕುಟುಂಬಕ್ಕೆ ಆ್ಯಂಬು ಬ್ಯಾಗ್‌ಗಳನ್ನು ನೀಡಲಾಗಿತ್ತು. ಗಂಟೆಗಳ ಕಾಲ ಅವರು ಅದನ್ನು ಒತ್ತಿ ಆಮ್ಲಜನಕ ಪೂರೈಸಿದ್ದರು. ಆದುದರಿಂದ ಸರಕಾರ ನಿರ್ಮಿತ ದುರಂತ ಎಂಬುದು ತುಂಬಾ ಸ್ಪಷ್ಟ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ದುರಂತವನ್ನು ಸರಕಾರ ಮುಚ್ಚಿ ಹಾಕಲು ಪ್ರಯತ್ನಿಸಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆಮ್ಲಜನಕದ ಕೊರತೆ ಈ ದುರಂತಕ್ಕೆ ಕಾರಣ ಎಂಬುದು ಸ್ಪಷ್ಟ ಎಂದು ಅವರು ಹೇಳಿದರು.