ಉಡುಪಿ: ದೇವಾಡಿಗರ ಸೇವಾ ಸಂಘದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ

Update: 2017-08-20 08:09 GMT

ಉಡುಪಿ, ಆ.20: ಇಂದು ಹಿಂದುಳಿದವರ್ಗದ ಮಕ್ಕಳು ಯಾರಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಗಳನ್ನು ಮಾಡುತ್ತಿದ್ದಾರೆ. ಸಮುದಾಯದ ಪರಿವರ್ತನೆ ಎಂಬುದು ಶ್ರೀಮಂತಿಕೆ, ಆಸ್ತಿಯಿಂದ ಆಗುವುದಿಲ್ಲ. ಮಕ್ಕಳಲ್ಲಿ ಬೌದ್ಧಿಕ ಪ್ರಗತಿ ಸಾಧಿಸುವುದೇ ಒಂದು ಸಮುದಾಯದ ನಿಜವಾದ ಪರಿವರ್ತನೆಯಾಗಿದೆ ಎಂದು ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ದೇವಾಡಿಗರ ಸೇವಾ ಸಂಘದ ವತಿಯಿಂದ ರವಿವಾರ ಚಿಟ್ಪಾಡಿ ದೇವಾಡಿಗರ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಯ ದಾರಿಯಲ್ಲಿ ಇಡೀ ಸಮುದಾಯ ಬೆನ್ನ ಹಿಂದೆ ಇದೆ ಎಂಬುದನ್ನು ಈ ಕಾರ್ಯಕ್ರಮ ಸಾರುತ್ತದೆ. ಯಾವುದೇ ಗುರಿ ತಲುಪುದು ಅಷ್ಟು ಸುಲಭದ ಕೆಲಸ ಅಲ್ಲ. ಅದಕ್ಕೆ ಪ್ರತೀದಿನ ಎಂಟು ತಾಸು ಮೀಸಲಿಟ್ಟು, ಕಠಿಣ ಪರಿಶ್ರಮ ಪಡಬೇಕು ಎಂದು ಅವರು ತಿಳಿಸಿದರು.

ಬದುಕಿನಲ್ಲಿ ಯಶಸ್ಸು ಗಳಿಸಿದ ಮಕ್ಕಳು ಮುಂದೆ ತನ್ನ ಸಮುದಾಯವನ್ನು ಮರೆಯಬಾರದು. ಸಮಾಜದಿಂದ ತಾನು ಗಳಿಸಿದಕ್ಕೆ ಪ್ರತಿಯಾಗಿ ತನ್ನ ಸಮು ದಾಯಕ್ಕೆ ಸೇವೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಉಡುಪಿ ದೇವಾಡಿಗರ ಸಂಘ ಹಾಗೂ ಬ್ರಹ್ಮಾವರ ದೇವಾಡಿಗರ ಸಂಘಕ್ಕೆ ಈಗಾಗಲೇ ತಲಾ 25 ಲಕ್ಷ ರೂ. ಅನುದಾನವನ್ನು ಒದಗಿಸಿದ್ದು, ಮುಂದೆ ಅಗತ್ಯಬಿದ್ದರೆ ಮತ್ತಷ್ಟು ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು .ದೇವಾಡಿಗ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ದುಬೈಯ ಉದ್ಯಮಿ ಹರೀಶ್ ಸೇರಿಗಾರ್, ಕರ್ನಾಟಕ ರಾಜ್ಯ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಡಾ.ದೇವರಾಜ ಕೆ., ಉಡುಪಿ ಶ್ರೀ ಏಕನಾಥೇಶ್ವರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ರತ್ನಾಕರ್ ಜಿ. ಎಸ್. ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೆ. ವಹಿಸಿದ್ದರು.

ಈ ಸಂದರ್ಭದಲ್ಲಿ ಯುವ ಸಾಧಕರಾದ ಪವನ್ ಧರ್ಮಪಾಲ್ ದೇವಾಡಿಗ, ಸುದರ್ಶನ್ ಸೇರಿಗಾರ್, ಡಾ.ವಿಶ್ವನಾಥ್, ಸಿಎ ನಾರಾಯಣ, ಪೊಲೀಸ್ ನಿರೀಕ್ಷಕ ಬಿ.ರತ್ನಕುಮಾರ್, ಅನುಷಾ ದೇವಾಡಿಗ, ಕ್ರೀಡಾಪಟು ಜಯಂತಿ ಮಾಧವ ದೇವಾಡಿಗ ಅವರನ್ನ ಸನ್ಮಾನಿಸಲಾಯಿತು.

ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಸಂಘದ ನಿಕಟಪೂರ್ವ ಅಧ್ಯಕ್ಷ ಯು.ಗಣೇಶ್ ದೇವಾಡಿಗ ಬ್ರಹ್ಮಗಿರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಸೇರಿಗಾರ ವಂದಿಸಿದರು. ರತ್ನಾಕರ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News