×
Ad

ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆ?

Update: 2017-08-20 17:36 IST

ವಾರಣಾಸಿ,ಆ.20: ವಾರಣಾಸಿಯಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳನ್ನು ನಂಬಬಹುದಾದರೆ ಪ್ರಧಾನಿ ನರೇಂದ್ರ ಮೋದಿ ಅವರು ನಾಪತ್ತೆಯಾಗಿದ್ದಾರೆ! ನಿರೀಕ್ಷೆ ಯಂತೆ ಇದು ಸ್ಥಳೀಯ ಪೊಲೀಸರನ್ನು ಕೆರಳಿಸಿದ್ದು, ಅವರೀಗ ಈ ಪೋಸ್ಟರ್‌ಗಳನ್ನು ಪ್ರದರ್ಶಿಸಿದವರಿಗಾಗಿ ಬೇಟೆಯಾಡುತ್ತಿದ್ದಾರೆ.

ತನ್ನ ಲೋಕಸಭಾ ಕ್ಷೇತ್ರವನ್ನು ಕಡೆಗಣಿಸಿ ಮೋದಿಯವರು ವಿದೇಶ ಪ್ರವಾಸಗಳಲ್ಲಿ ವ್ಯಸ್ತರಾಗಿರುವುದನ್ನು ಗೇಲಿ ಮಾಡಿರುವ ಈ ಪೋಸ್ಟರ್‌ಗಳಲ್ಲಿ ‘‘ಜಾನೆ ವೋ ಕೌನ್ ಸಾ ದೇಶ ತುಮ್ ಚಲೆ ಗಯೇ(ನೀವು ಯಾವ ದೇಶಕ್ಕೆ ಹೋಗಿದ್ದೀರೋ ಗೊತ್ತಾಗಿಲ್ಲ)’’ ಎಂಬ ಬರಹ ಢಾಳಾಗಿ ಕಾಣುತ್ತಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಬಿಜೆಪಿಯ ಪ್ರಚಾರಕ್ಕಾಗಿ ಕಳೆದ ಮಾರ್ಚ್‌ನಲ್ಲಿ ವಾರಣಾಸಿಗೆ ಭೇಟಿ ನೀಡಿದ್ದೇ ಕೊನೆ, ಆ ಬಳಿಕ ಮೋದಿ ಇಲ್ಲೆಲ್ಲೂ ಕಂಡು ಬಂದಿಲ್ಲ ಎಂದೂ ಪೋಸ್ಟರ್‌ನಲ್ಲಿ ಹೇಳಲಾಗಿದೆ.

‘‘ಕಾಶಿಯ ಅಸಹಾಯಕ ಮತ್ತು ಅಮಾಯಕ ಜನರ’’ ಪರವಾಗಿ ಅಂಟಿಸಲಾಗಿರುವ ಈ ಪೋಸ್ಟರ್‌ಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಯಾವುದೇ ರಾಜಕೀಯ ಗುಂಪು ಅಥವಾ ವ್ಯಕ್ತಿ ಮುಂದೆ ಬಂದಿಲ್ಲ. ಮೋದಿಯವರ ಪತ್ತೆಗಾಗಿ ಎಫ್‌ಐಆರ್ ದಾಖಲಿಸು ವುದಾಗಿಯೂ ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

ಪೋಸ್ಟರ್‌ಗಳು ಕಾಣಿಸಿಕೊಂಡ ಬೆನ್ನಿಗೇ ಪೊಲೀಸರು ಅವುಗಳನ್ನು ಕಿತ್ತೆಸೆದಿದ್ದಾರಾದರೂ ಅವುಗಳ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿವೆ. ಪೋಸ್ಟರ್ ಹಚ್ಚಿದವರನ್ನು ಪತ್ತೆ ಹಚ್ಚಲು ಪೊಲೀಸರೀಗ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪೋಸ್ಟರ್‌ಗಳು ಕಾಣಿಸಿಕೊಂಡ ಪ್ರದೇಶಗಳ ನಿವಾಸಿಗಳನ್ನೂ ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಕಳೆದ ವಾರ ಸಂಸದ ರಾಹುಲ್ ಗಾಂಧಿಯವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಪೋಸ್ಟರ್‌ಗಳು ಅವರು ಪ್ರತಿನಿಧಿಸುತ್ತಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News