×
Ad

ತಪ್ಪಿತಸ್ಥರನ್ನು ಇಂದು ಸಂಜೆಯೊಳಗೆ ಪತ್ತೆ ಹಚ್ಚುವಂತೆ ರೈಲ್ವೆ ಮಂಡಳಿಗೆ ಸಚಿವ ಪ್ರಭು ಆದೇಶ

Update: 2017-08-20 17:53 IST

ಹೊಸದಿಲ್ಲಿ,ಆ.20: ಮುಝಫರ್‌ನಗರದ ಬಳಿ ಶನಿವಾರ ಉತ್ಕಲ್ ಎಕ್ಸಪ್ರೆಸ್ ರೈಲು ಹಳಿ ತಪ್ಪಿ ಸಂಭವಿಸಿದ ದುರಂತಕ್ಕೆ ಹೊಣೆಗಾರರನ್ನು ಮೇಲ್ನೋಟಕ್ಕೆ ಲಭ್ಯ ಸಾಕ್ಷಾಧಾರಗಳ ಆಧಾರದಲ್ಲಿ ಇಂದು ಸಂಜೆಯೊಳಗೆ ಪತ್ತೆ ಹಚ್ಚುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ಎ.ಕೆ.ಮಿತ್ತಲ್ ಅವರಿಗೆ ಆದೇಶಿಸಿದ್ದಾರೆ. ಈ ದುರಂತದಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಲಾಗಿದೆ ಮತ್ತು ಯಾವುದೇ ಲೋಪ ಕಂಡುಬಂದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಟ್ವೀಟಿಸಿದ್ದಾರೆ. ಹಳಿಗಳ ದುರಸ್ತಿ ಕಾರ್ಯ ಭರದಿಂದ ನಡಯುತ್ತಿದೆ ಮತ್ತು ಅಪಘಾತದ ಗಾಯಾಳುಗಳಿಗೆ ಎಲ್ಲ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ಹಾನಿಗೀಡಾಗಿರುವ ಏಳು ಬೋಗಿಗಳನ್ನು ಮೇಲಕ್ಕೆತ್ತಲಾಗಿದೆ. ರೈಲ್ವೆ ಮಂಡಳಿಯ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಲೋಪವನ್ನು ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. 

ತನ್ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ಜಂಷೆಡ್, ಸದಸ್ಯ ಸಂಚಾರ(ರೈಲ್ವೆ) ಅವರು, ರೈಲ್ವೆ ಹಳಿಗಳಲ್ಲಿ ನಡೆಯುತ್ತಿರುವ ನಿರ್ವಹಣಾ ಕಾಮಗಾರಿ ಬೋಗಿಗಳು ಹಳಿತಪ್ಪಲು ಕಾರಣವಾಗಿರಬಹುದು. ಯಾವ ಮಾದರಿಯ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು ಎನ್ನುವುದನ್ನು ರೈಲ್ವೆ ಸುರಕ್ಷತಾ ಆಯುಕ್ತರು ತನ್ನ ತನಿಖಾ ವರದಿಯಲ್ಲಿ ತಿಳಿಸಲಿದ್ದಾರೆ ಎಂದು ತಿಳಿಸಿದರು.

ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತೇ ಎಂಬ ಬಗ್ಗೆಯೂ ಸುರಕ್ಷತಾ ಆಯುಕ್ತರು ಪರಿಶೀಲಿಸಲಿದ್ದಾರೆ. ನಮ್ಮ ಸಿಬ್ಬಂದಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಜಂಷೆಡ್ ತಿಳಿಸಿದರು.

ಕಳೆದ 10 ದಿನಗಳಿಂದಲೂ ಹಳಿಗಳ ದುರಸ್ತಿ ಕಾಮಗಾರಿ ನಡೆಯುತ್ತಿತ್ತು ಎಂದು ಆಸುಪಾಸಿನ ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ವಿಭಾಗದ ಡಿಆರ್‌ಎಂ ಆರ್.ಎನ್.ಸಿಂಗ್ ಅವರು, ಅದು ಮಾಮೂಲು ನಿರ್ವಹಣಾ ಕಾಮಗಾರಿ ಯಾಗಿತ್ತು. ರೈಲ್ವೆ ಸಚಿವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಆ ವರದಿ ಬರಲಿ. ಇದಕ್ಕಿಂತ ಹೆಚ್ಚು ತಾನೇನೂ ಹೇಳುವಂತಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದುರಂತದ ಬಗ್ಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ತನ್ನ ಸರಕಾರವು ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಪರಿಹಾರವನ್ನು ನೀಡುವುದಾಗಿ ಆದಿತ್ಯನಾಥ ಪ್ರಕಟಿಸಿದ್ದಾರೆ.

ರೈಲ್ವೆ ಇಲಾಖೆಯು ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 3.5ಲ.ರೂ., ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000 ರೂ. ಮತ್ತು ಸಣ್ಣಪುಟ್ಟ ಗಾಯಗಳಾ ದವರಿಗೆ 25,000 ರೂ.ಗಳ ಪರಿಹಾರವನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News