ಭಾರತೀಯರಿಗೆ ಹಣ ಕೊಟ್ಟು ವಾಪಸ್ ಕಳುಹಿಸಿ

Update: 2017-08-20 13:35 GMT

ಲಂಡನ್, ಆ. 20: ಬ್ರಿಟನ್‌ನಲ್ಲಿರುವ ‘ಅನಗತ್ಯ’ ಜನರನ್ನು ತೆರವುಗೊಳಿಸಲು ಯುಕೆ ಇಂಡಿಪೆಂಡೆನ್ಸ್ ಪಾರ್ಟಿ (ಯುಕೆಐಪಿ) ಎಂಬ ವಲಸೆ ವಿರೋಧಿ ಹಾಗೂ ಕಡು ಬಲಪಂಥೀಯ ಪಕ್ಷದ ನಾಯಕರೊಬ್ಬರು ವಿಶಿಷ್ಟ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ. ಅದೆಂದರೆ, ಭಾರತೀಯರು ಸೇರಿದಂತೆ ವಲಸಿಗರು ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿ ಹೋಗಲು ಹಣ ಕೊಡುವುದು!

‘ತ್ವರಿತ ಗತಿಯ ರಫ್ತು-ಆಮದು ಯೋಜನೆ’ಯನ್ವಯ ಮುಖ್ಯವಾಗಿ ಭಾರತೀಯರು ಮತ್ತು ತಾಂಝಾನಿಯನ್ನರನ್ನು ವಾಪಸ್ ಕಳುಹಿಸಬೇಕು ಎಂಬುದಾಗಿ ಜಾನ್ ರೀಸ್-ಎವನ್ಸ್ ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ, ನಿರ್ದಿಷ್ಟ ಕಾಮನ್‌ವೆಲ್ತ್ ದೇಶಗಳ ವಲಸಿಗರು ಬ್ರಿಟನ್ ತೊರೆಯಲು 9,000 ಪೌಂಡ್ (ಸುಮಾರು 7.40 ಲಕ್ಷ ರೂಪಾಯಿ)ವರೆಗೆ ಹಣ ನೀಡಬಹುದಾಗಿದೆ.

‘‘ಇದೇನೂ ವಿನಾಶಕಾರಿಯಲ್ಲ, ಅಥವಾ ಫ್ಯಾಶಿಸ್ಟ್ ಧೋರಣೆಯೂ ಅಲ್ಲ. ಉತ್ತಮ ಮಾನವ ತಳಿಯನ್ನು ಹೊಂದುವ ಪ್ರಕ್ರಿಯೆಯಲ್ಲಿ ನನಗೆ ಆಸಕ್ತಿಯಿಲ್ಲ. ಆದಾಗ್ಯೂ, ವಲಸೆ ಪ್ರಮಾಣವನ್ನು ವರ್ಷಕ್ಕೆ 10 ಲಕ್ಷದಷ್ಟು ಕಡಿಮೆ ಮಾಡುವ ಗುರಿಯನ್ನು ತಲುಪಲು ಶ್ರಮಿಸಲು ನಾನು ಪ್ರಯತ್ನಿಸುತ್ತೇನೆ’’ ಎಂದು ಅವರು ಹೇಳಿದ್ದಾರೆನ್ನಲಾಗಿದೆ.

ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿ ಈ ತಿಂಗಳ ಆದಿ ಭಾಗದಲ್ಲಿ ನಡೆದ ಸಭೆಯಲ್ಲಿ ಅವರು ಮಾಡಿದ ಭಾಷಣದ ವೀಡಿಯೊದಲ್ಲಿ ಈ ಮಾತುಗಳಿವೆ. ಈ ಸುದ್ದಿಯನ್ನು ‘ಡೇಲಿ ಮಿರರ್’ ಮೊದಲು ಪ್ರಸಾರಿಸಿದೆ.

‘‘ಬ್ರಿಟನ್ ಸರಕಾರದ ವಿದೇಶಿ ನೆರವು ನಿಧಿ ಬಜೆಟನ್ನು ಈಗಿನ ವರ್ಷಕ್ಕೆ 13 ಬಿಲಿಯ ಪೌಂಡ್ (1,06,821 ಕೋಟಿ ರೂಪಾಯಿ)ನಿಂದ 1 ಬಿಲಿಯ ಪೌಂಡ್ (8217 ಕೋಟಿ ರೂಪಾಯಿ)ಗೆ ಕಡಿತಗೊಳಿಸಬೇಕು. ಅದರಲ್ಲಿ ಉಳಿಯುವ ಹಣವನ್ನು ಬ್ರಿಟಿಶ್ ಭಾರತೀಯರು ಮತ್ತು ತಾಂಝಾನಿಯನ್ನರು ಸೇರಿದಂತೆ ಅವಳಿ ಪೌರತ್ವ ಹೊಂದಿರುವ ಬ್ರಿಟಿಶ್ ನಾಗರಿಕರಿಗೆ ಪರಿಹಾರ ರೂಪದಲ್ಲಿ ನೀಡಿ ವಾಪಸ್ ಕಳುಹಿಸಬೇಕು. ಅವರು ತಮ್ಮ ದೇಶಗಳಲ್ಲಿ ತಮ್ಮದೇ ಆದ ಉದ್ಯಮಗಳನ್ನು ನಡೆಸಬಹುದು’’ ಎಂಬ ಸಲಹೆಯನ್ನು ಕಡು ಬಲಪಂಥೀಯ ನಾಯಕ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News