ಬಾಸ್ಟನ್: ದ್ವೇಷ ಭಾಷಣದ ವಿರುದ್ಧ ಬೀದಿಗಿಳಿದ ಸಾವಿರಾರು ಜನ

Update: 2017-08-20 13:49 GMT

ಬಾಸ್ಟನ್ (ಅಮೆರಿಕ), ಆ. 20: ಬಾಸ್ಟನ್‌ನಲ್ಲಿ ನಿಗದಿಯಾಗಿದ್ದ ದ್ವೇಷ ಭಾಷಣಗಳ ಸಭೆಯ ವಿರುದ್ಧ ಪ್ರತಿಭಟಿಸಲು ನಗರದಲ್ಲಿ ಶನಿವಾರ ಸಾವಿರಾರು ಮಂದಿ ಬೀದಿಗಿಳಿದರು.

ಬಲಪಂಥೀಯ ಗುಂಪೊಂದು ‘ವಾಕ್ ಸ್ವಾತಂತ್ರ’ಕ್ಕಾಗಿ ಆಗ್ರಹಿಸಿ ಅಲ್ಲಿ ಸಭೆಯೊಂದನ್ನು ಏರ್ಪಡಿಸಿತ್ತು. ಅದಕ್ಕೆ ಪ್ರತಿಯಾಗಿ, ದ್ವೇಷ ಭಾಷಣವನ್ನು ವಿರೋಧಿಸಲು ಅಲ್ಲಿ ಸಾವಿರಾರು ಮಂದಿ ಸೇರಿದ್ದರು. ‘ದ್ವೇಷ’ದ ವಿರುದ್ಧ ಹೋರಾಟಕ್ಕಾಗಿ ನೆರೆದವರ ಘೋಷಣೆಗಳಲ್ಲಿ ‘ವಾಕ್ ಸ್ವಾತಂತ್ರ’ಕ್ಕಾಗಿ ನೆರೆದವರ ಮಾತುಗಳು ಹೂತು ಹೋದವು.

ಕಳೆದ ವಾರ ಶಾರ್ಲಟ್ಸ್‌ವಿಲ್‌ನಲ್ಲಿ ‘ಬಿಳಿಯರು ಶ್ರೇಷ್ಠರು’ ಎಂದು ಪ್ರತಿಪಾದಿಸುವ ಗುಂಪುಗಳು ಮತ್ತು ತಾರತಮ್ಯ ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದು ಓರ್ವ ಮಹಿಳೆ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವುದನ್ನು ಸ್ಮರಿಸಬಹುದು.

ಆದರೆ, ಈ ಬಾರಿ ಯಾವುದೇ ಅಪಾಯವನ್ನು ಎಳೆದುಕೊಳ್ಳಲು ಸಿದ್ಧರಿರದ ಪೊಲೀಸರು ಎರಡೂ ಗುಂಪುಗಳ ಜನರು ಪರಸ್ಪರ ಮುಖಮುಖಿಯಾಗುವುದನ್ನು ತಪ್ಪಿಸಿದರು.

‘ವಾಕ್ ಸ್ವಾತಂತ್ರ’ ಪರವಾಗಿ ಮಾತನಾಡಲು ಹಲವಾರು ಕಡು ಬಲಪಂಥೀಯ ಭಾಷಣಗಾರರನ್ನು ಸಂಘಟಕರು ಆಮಂತ್ರಿಸಿದ್ದರು. ಅವರನ್ನು ಪೊಲೀಸರು ಐತಿಹಾಸಿಕ ಬಾಸ್ಟನ್ ಕಾಮನ್ ಉದ್ಯಾನವನದಲ್ಲಿ ಇರಿಸಿದರು.

ಶನಿವಾರದ ಸಭೆಗೆ ಪೊಲೀಸರು ಒಂದು ವಾರದಿಂದಲೇ ಸಿದ್ಧತೆ ನಡೆಸುತ್ತಿದ್ದರು. 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಲವಾರು ಪೊಲೀಸರು ಮೋಟರ್ ಬೈಕ್‌ಗಳಲ್ಲಿ ಗಸ್ತು ತಿರುಗಿದರು.

ಬಲಪಂಥೀಯರ ಸಭೆಯಲ್ಲಿ ಕೆಲವು ಡಝನ್ ಜನರಷ್ಟೇ ಇದ್ದರು. ಆದರೆ, ಆ ಸಭೆಯ ವಿರುದ್ಧ ಹೋರಾಡುತ್ತಿದ್ದವರ ಘೋಷಣೆಗಳಿಂದಾಗಿ ಭಾಷಣಕಾರರು ಏನು ಹೇಳಿದರೆಂದೇ ಗೊತ್ತಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News