ನೆರೆ ದೇಶಗಳ ವಿರುದ್ಧ ಭಯೋತ್ಪಾದನೆಗೆ ಪಾಕ್ ನೆಲ ಬಳಕೆಯಾಗಬಾರದು: ಪಾಕ್‌ಗೆ ಅಮೆರಿಕದ ಜನರಲ್ ತಾಕೀತು

Update: 2017-08-20 14:43 GMT

ಇಸ್ಲಾಮಾಬಾದ್, ಆ. 20: ನೆರೆ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ತನ್ನ ನೆಲ ಬಳಕೆಯಾಗದಂತೆ ಪಾಕಿಸ್ತಾನ ಖಾತರಿಪಡಿಸಬೇಕು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಕಮಾಂಡರ್ ಜನರಲ್ ಜೋಸೆಫ್ ವೊಟೆಲ್ ಹೇಳಿದ್ದಾರೆ.

ಈ ವಾರ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ ವೇಳೆ ಅವರು ಪಾಕಿಸ್ತಾನಕ್ಕೆ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಇದು ಅವರು ಕಮಾಂಡರ್ ಆಗಿ ಪಾಕಿಸ್ತಾನಕ್ಕೆ ನೀಡುತ್ತಿರುವ ಮೂರನೆ ಭೇಟಿಯಾಗಿದೆ.

ತನ್ನ ಪಾಕಿಸ್ತಾನ ಭೇಟಿಯ ವೇಳೆ, ಜನರಲ್ ಜೋಸೆಫ್ ವೊಟೆಲ್ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ, ರಕ್ಷಣಾ ಸಚಿವ ಖುರ್ರಮ್ ದಸ್ತ್‌ಗಿರ್, ಸೇನಾ ಮುಖ್ಯಸ್ಥರ ಜಂಟಿ ಸಮಿತಿಯ ಅಧ್ಯಕ್ಷ ಜನರಲ್ ಝುಬೇರ್ ಹಯಾತ್ ಮತ್ತು ಸೇನಾ ಮಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವರನ್ನು ಭೇಟಿಯಾದರು.

‘‘ಪಾಕಿಸ್ತಾನಿ ನಾಯಕರ ಜೊತೆಗಿನ ಚರ್ಚೆಯ ವೇಳೆ, ನೆರೆ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನಿ ನೆಲ ಬಳಕೆಯಾಗದಂತೆ ಸಂಬಂಧಪಟ್ಟ ಎಲ್ಲರು ಖಾತರಿಪಡಿಸಬೇಕು’’ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News