ಬ್ರಿಟನ್‌ನಲ್ಲಿ 1 ಲಕ್ಷಕ್ಕೂ ಅಧಿಕ ಭಾರತೀಯ ಅಕ್ರಮ ವಲಸಿಗರು: ಅವರಿಗೆ ಆಶ್ರಯ ನೀಡಿದವರ ಬಂಧನ

Update: 2017-08-20 15:44 GMT

ಲಂಡನ್, ಆ. 20: ಬ್ರಿಟನ್‌ನಲ್ಲಿ ಕೆಲಸ ಮಾಡಲು ಹಕ್ಕು ಇಲ್ಲದವರನ್ನು ಕೆಲಸಕ್ಕೆ ನೇಮಿಸಿದ ಉದ್ಯೋಗದಾತರು ಹಾಗೂ ಅವರಿಗೆ ಬಾಡಿಗೆಗೆ ಮನೆಗಳನ್ನು ನೀಡಿದ ಕಟ್ಟಡಗಳ ಮಾಲೀಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ, ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಸುಮಾರು 200 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಅವರ ಪೈಕಿ ಹಲವರು ಭಾರತೀಯರಾಗಿದ್ದಾರೆ.

ವೀಸಾ ಅವಧಿ ಮೀರಿ ಬ್ರಿಟನ್‌ನಲ್ಲಿ ವಾಸವಾಗಿರುವ ಭಾರತೀಯರು ಮತ್ತು ಅಕ್ರಮವಾಗಿ ಬ್ರಿಟನ್ ಪ್ರವೇಶಿಸಿದವರನ್ನು ಗುರುತಿಸಿ, ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನು ಬ್ರಿಟನ್ ಚುರುಕುಗೊಳಿಸಿದೆ.

2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟನ್ ಪ್ರಧಾನಿ ತೆರೇಸಾ ಮೇ, ಅಕ್ರಮ ವಲಸಿಗರು ಭಾರತಕ್ಕೆ ವಾಪಸಾದರೆ ಭಾರತೀಯರಿಗೆ ಬ್ರಿಟನ್ ವೀಸಾ ನೀಡಿಕೆಯಲ್ಲಿ ಹೆಚ್ಚಳವಾಗುತ್ತದೆ ಎಂದಿದ್ದರು.

 ಬ್ರಿಟನ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅವರ ಸಂಖ್ಯೆ ಒಂದು ಲಕ್ಷವನ್ನೂ ದಾಟಿದೆ ಎಂದು ಅದು ಹೇಳಿದೆ. ಎರಡನೆ ಸ್ಥಾನದಲ್ಲಿ ನೈಜೀರಿಯವಿದ್ದು, ಆ ದೇಶದ ಅಕ್ರಮ ವಲಸಿಗರ ದುಪ್ಪಟ್ಟಿಗಿಂತಲೂ ಹೆಚ್ಚು ಅಕ್ರಮ ಭಾರತೀಯ ವಲಸಿಗರು ಬ್ರಿಟನ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

ವೀಸಾ ಅವಧಿ ಮೀರಿ ಬ್ರಿಟನ್‌ನಲ್ಲಿ ವಾಸಿಸುತ್ತಿರುವವರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಮತ್ತು ಆಲ್ಬೇನಿಯ ದೇಶಗಳ ಪ್ರಜೆಗಳೂ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News