ಉತ್ಕಲ್ ಎಕ್ಸ್‌ಪ್ರೆಸ್ ಅಪಘಾತ: ಉಚಿತ ಪ್ರಯಾಣದ ಭರವಸೆ ಈಡೇರಿಸದ ಆದಿತ್ಯನಾಥ್ ಸರಕಾರ
Update: 2017-08-20 22:01 IST
ಲಕ್ನೋ, ಆ. 20: ಅಪಘಾತಕ್ಕೆ ಒಳಗಾದ ಉತ್ಕಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರ ಗುಂಪೊಂದು ಹರಿದ್ವಾರಕ್ಕೆ ಪ್ರಯಾಣಿಸುವ ಸಂದರ್ಭ ಉತ್ತರಪ್ರದೇಶ ಸರಕಾರದ ಭರವಸೆಯ ಹೊರತಾಗಿಯೂ ಟಿಕೆಟು ಪಡೆದುಕೊಳ್ಳುವಂತೆ ಬಲವಂತ ಮಾಡಿದ ಘಟನೆ ಶನಿವಾರ ನಡೆದಿದೆ.
ಖಾಟೌಲಿಯ ಹೊರವಲಯದ ನಿರ್ಜನ ಪ್ರದೇಶದಲ್ಲಿ ಚಾಲಕ ಬಸ್ ನಿಲ್ಲಿಸಿ ಟಿಕೇಟ್ ಪಡೆದುಕೊಳ್ಳುವಂತೆ ಬಲವಂತಪಡಿಸಿದ ಎಂದು ರವಿವಾರ ಮುಂಜಾನೆ ಹರಿದ್ವಾರ ತಲುಪಿದ ನಿಹಾಲ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಉತ್ಕಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರಿಗೆ ಉತ್ತರಪ್ರದೇಶ ಸರಕಾರ ಉಚಿತವಾಗಿ ಸಾರಿಗೆ ವೆಚ್ಚ ನೀಡುತ್ತದೆ ಎಂದು ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯನಿರ್ವಹಣಾ ನಿರ್ದೇಶಕ ಗುರು ಪ್ರಸಾದ್ ಭರವಸೆ ನೀಡಿದ್ದರು.
ಯಾರೊಬ್ಬರೂ ಹಣ ಕೇಳುವ ಪ್ರಶ್ನೆಯೇ ಇಲ್ಲ. ಯಾರಾದರೂ ಕೇಳಿದರೆ ಕೂಡಲೇ ವರದಿ ಮಾಡಿ ಎಂದು ಅವರು ಹೇಳಿದ್ದರು.
ಆದರೆ, ಮಧ್ಯಪ್ರದೇಶದ ಈ ಪ್ರಯಾಣಿಕರು ಹಣ ನೀಡಿ ಟಿಕೆಟ್ ಪಡೆದುಕೊಂಡು ಪ್ರಯಾಣಿಸಿದ್ದಾರೆ.