ಭೋಪಾಲದಲ್ಲಿ ಅಮಿತ್ ಶಾ ಊಟ ಮಾಡಿದ ಗಿರಿಜನ ವ್ಯಕ್ತಿಯ ಮನೆಯಲ್ಲಿ ಶೌಚಾಲಯವಿಲ್ಲ

Update: 2017-08-20 17:39 GMT

ಭೋಪಾಲ,ಆ.20: ಶೋಷಿತ ವರ್ಗಗಳನ್ನು ತಲುಪುವ ಆಡಳಿತ ಪಕ್ಷದ ಅಭಿಯಾನದ ಅಂಗವಾಗಿ ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರವಿವಾರ ತನ್ನ ಮನೆಯಲ್ಲಿ ಊಟ ಮಾಡಿದ ಬಳಿಕ ಬುಡಕಟ್ಟು ಜನಾಂಗಕ್ಕೆ ಸೇರಿದ ಇಲ್ಲಿಯ ಸೂರಜ್ ನಗರ ಬಡಾವಣೆಯ ನಿವಾಸಿಯಾಗಿರುವ ಬಿಜೆಪಿ ಕಾರ್ಯಕರ್ತ ಕಮಲಸಿಂಗ್ ಉಯಿಕೆಯ ಕಾಲುಗಳು ನೆಲದ ಮೇಲೆಯೇ ಇಲ್ಲ. ಆದರೆ ಶಾ ಅವರ ಈ ಊಟದ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಬಂಡವಾಳವನ್ನೇ ಬಯಲುಗೊಳಿಸಿದೆ. ನಗರಾಭಿವೃದ್ಧಿ ಸಚಿವಾಲಯದ ಸಮೀಕ್ಷೆಯಂತೆ ಭೋಪಾಲ ಇಡೀ ದೇಶದಲ್ಲಿ ಎರಡನೇ ಅತ್ಯಂತ ‘ಸ್ವಚ್ಛ ನಗರ’ವಾಗಿದ್ದು, ‘ಬಯಲು ಶೌಚ ಮುಕ್ತ’ವೆಂದು ಘೋಷಿಸಲಾಗಿದೆ. ಆದರೆ ಶಾ ಊಟ ಮಾಡಿದ ಉಯಿಕೆ ಮನೆಯಲ್ಲಿ ಶೌಚಾಲಯವೇ ಇಲ್ಲ. ಆತ ಹಾಗೂ ಆ ಬಡಾವಣೆಯ ಹೆಚ್ಚಿನ ಜನರು ಇಂದಿಗೂ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ!

ಶಾ ಭೇಟಿಯು ಪಕ್ಷದಲ್ಲಿ ಮತ್ತು ಸಮಾಜದಲ್ಲಿ ಉಯಿಕೆಯ ಗೌರವವನ್ನು ಹೆಚ್ಚಿಸಿದೆ. ಆದರೆ ಉಯಿಕೆ ಶಾ ಭೇಟಿಯಿಂದಾದರೂ ಕೊನೆಗೂ ತನ್ನ ಮನೆಗೆ ಶೌಚಾಲಯ ಮಂಜೂರಾಗಬಹುದು ಎಂಬ ಕನಸು ಕಾಣುತ್ತಿದ್ದಾನೆ. ಮೋದಿ ಸರಕಾರದ ಸ್ವಚ್ಛ ಭಾರತ ಅಭಿಯಾನದಡಿ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಈ ಬಡಪಾಯಿ ಕಳೆದ ಆರು ತಿಂಗಳುಗಳಿಂದಲೂ ಕಂಬದಿಂದ ಕಂಬಕ್ಕೆ ಸುತ್ತುತ್ತಿದ್ದಾನೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಉಯಿಕೆ, ಆರು ತಿಂಗಳ ಹಿಂದೆಯೇ ತಾನು ಶೌಚಾಲಯಕ್ಕಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈವರೆಗೂ ಧನಾತ್ಮಕ ಪ್ರತಿಕ್ರಿಯೆ ದೊರಕಿಲ್ಲ ಎಂದು ಅಲವತ್ತುಕೊಂಡ. ಅದೇ ಬಡಾವಣೆಯಲ್ಲಿ ವಾಸವಿರುವ ಆತನ ಸೋದರ ಮುಕೇಶ ಈ ವರ್ಷದ ಆರಂಭದಲ್ಲಿಯೇ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಇನ್ನೂ ಚಾತಕಪಕ್ಷಿಯಂತೆ ಕಾಯುತ್ತಲೇ ಇದ್ದಾನೆ!

ಹೆಚ್ಚೆಂದರೆ ಐದು ಜನರು ವಾಸವಾಗಿರಬಹುದಾದ ಉಯಿಕೆಯ ಜೋಪಡಿಯಂತಹ ಮನೆಯಲ್ಲಿ ಶೌಚಾಲಯವಿಲ್ಲ ಎನ್ನುವುದು ಶಾ ಭೇಟಿಯಿಂದಾಗಿ ಈಗ ರಾಜಕೀಯ ವಿಷಯವಾಗಿದೆ.

 ಮಧ್ಯಪ್ರದೇಶದಲ್ಲಿಯ ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಶಾ ಅವರ ಹೊಗಳಿಕೆಯ ಹೇಳಿಕೆಗಳನ್ನು ಉಯಿಕೆಯ ದುಃಸ್ಥಿತಿ ಬಯಲುಗೊಳಿಸಿದೆ ಎಂದು ಹೇಳಿದ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಅಜಯ ಸಿಂಗ್ ಅವರು, ರಾಜಧಾನಿ ಭೋಪಾಲದಲ್ಲಿಯೇ ಇಂತಹ ಸ್ಥಿತಿಯಿದ್ದರೆ, ರಾಜ್ಯದ ಉಳಿದೆಡೆ ಹೇಗಿರಬಹುದು ಎನ್ನುವುದನ್ನು ಯಾರೇ ಆದರೂ ಊಹಿಸಬಹುದು ಎಂದರು.

ಆದರೆ ಶಾ ಭೇಟಿಯು ಸರಕಾರವು ಉಯಿಕೆಯ ಅರ್ಜಿಯತ್ತ ಗಮನ ಹರಿಸುವುದನ್ನು ಅನಿವಾರ್ಯವಾಗಿಸಿದೆ. ಸೂರಜ್ ನಗರಕ್ಕೆ ಶಾ ಜೊತೆ ಭೇಟಿ ನೀಡಿದ್ದ ರಾಜ್ಯದ ಕಂದಾಯ ಸಚಿವ ಉಮಾಶಂಕರ ಗುಪ್ತಾ ಅವರು, ಉಯಿಕೆಯ ಅರ್ಜಿ ಪರಿಶೀಲನೆ ಯಲ್ಲಿದೆ ಮತ್ತು ಶೀಘ್ರವೇ ಆತನ ಮನೆಯಲ್ಲಿ ಶೌಚಾಲಯ ನಿರ್ಮಾಣ ವಾಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News