ಬಾರದ ಮಳೆ: ರೆತರನು್ನ ಕಂಗೆಡಿಸಿದ ಸೂರ್ಯಕಾಂತಿ

Update: 2017-08-20 18:07 GMT

ಚಿಕ್ಕಮಗಳೂರು, ಆ.20: ಅರೆಮಲೆನಾಡು ರೈತರ ಕೈ ಹಿಡಿಯುತ್ತಿದ್ದ ಬೆಳೆ ಸೂರ್ಯಕಾಂತಿ, ಈ ಸಲ ಮಳೆಯಾಗದಿರುವ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ.

ಸೂರ್ಯಕಾಂತಿ ಕಣ್ಣಾಡಿಸಿದಲ್ಲೆಲ್ಲ ತನ್ನ ಸೌಂದರ್ಯ ಪುಷ್ಪರಾಶಿಯಿಂದ ಆಕರ್ಷಕವಾಗಿ ಗೋಚರಿಸುವ ಹೂವು. ಇದು ಸದಾ ಚಿಕ್ಕಮಗಳೂರು ಜಿಲ್ಲೆಯ ಅರೆಮಲೆನಾಡು ಎನ್ನಿಸಿಕೊಂಡಿರುವ ಕಡೂರು ತಾಲೂಕಿನ ರೈತರ ಕೈಹಿಡಿಯುತ್ತಿದ್ದ ಬೆಳೆ. ಪೂರ್ವ ಮುಂಗಾರಿನಲ್ಲಿ ರೈತರು ಈ ಬೆಳೆ ಬಿತ್ತನೆ ಮಾಡುತ್ತಿದ್ದರು. ಕಡೂರು ತಾಲೂಕಿನಲ್ಲಿ ಸುಮಾರು 1,300 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿವರ್ಷ ಸೂರ್ಯಕಾಂತಿಯನ್ನು ಬಿತ್ತನೆ ಮಾಡಲಾಗುತ್ತಿತ್ತು.

ರೈತರು ಎಕರೆಗೆ ಸುಮಾರು 10ರಿಂದ 15 ಸಾವಿರ ರೂ. ಖರ್ಚು ಮಾಡಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಕೆಲವೊಂದು ಭಾಗದಲ್ಲಿ ಸಂಪೂರ್ಣ ಮಳೆ ಕೈಕೊಟ್ಟ ಕಾರಣ ಭೂಮಿಗೆ ಬಿದ್ದ ಬೀಜ ಮೊಳಕೆ ಒಡೆಯದೇ ಹಾಳಾಗಿದೆ. ಒಂದಷ್ಟು ಕಡೆ ಬೀಜ ಮೊಳಕೆ ಒಡೆದು ಪೈರು ಮೇಲೆದ್ದಿದೆ. ಅದು ಸಂಪೂರ್ಣ ಕಳಪೆಯಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮಳೆಯಾಗದಿದ್ದ ಕಾರಣ ಈ ಬಾರಿ ರೈತರು 700 ಹೆಕ್ಟೇರ್‌ನಲ್ಲಿ ಬೀಜ ಬಿತ್ತನೆ ಮಾಡಿದ್ದರು. ಒಂದಷ್ಟು ಬಿತ್ತಿದ ಬೆಳೆಯೂ ನಾಶವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆ ಶೂನ್ಯವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಸತ್ಯಪ್ಪ.
ರೈತರ ಜಮೀನುಗಳಲ್ಲಿ ತನ್ನ ಸೌಂದರ್ಯ ರಾಶಿಯಿಂದ ಗಮನ ಸೆಳೆಯುತ್ತಿರುವ ಸೂರ್ಯಕಾಂತಿ ಅನ್ನದಾತನಿಗೆ ನಿರಾಸೆ ಮೂಡಿಸಿದೆ. ಇದರಿಂದ ಸದಾ ಮಲೆನಾಡು ಜಿಲ್ಲೆಯ ಅರೆಮಲೆನಾಡು ಭಾಗದ ರೈತರ ಕೈಹಿಡಿಯುತ್ತಿದ್ದ ಸೂರ್ಯಕಾಂತಿ ಬೆಳೆ ಈ ಬಾರಿ ಕೈಕೊಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸಮಯದಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಕೈ ಸುಟ್ಟುಕೊಂಡ ರೈತರ ನೆರವಿಗೆ ಬರಬೇಕಾಗಿರುವುದು ಸೂಕ್ತ.

ಕಡೂರು ಭಾಗದಲ್ಲಿ ತೀವ್ರ ಬರಗಾಲವಿದೆ. ಇಲ್ಲಿ ಕೆಲ ವರ್ಷಗಳಿಂದ ಸತತ ಮಳೆ ಇಲ್ಲದೆ ಯಾವ ಬೆಳೆಯೂ ಕೈಗೂಡುತ್ತಿಲ್ಲ. ಸೂರ್ಯಕಾಂತಿಯನ್ನು ನಂಬಿ ಜೀವನ ನಡೆಸುತ್ತಿರುವ ಸಣ್ಣ ರೈತರ ಬದುಕು ದುಸ್ತರವಾಗುತ್ತಿದೆ. ಎಕರೆಗೆ 10-15 ಸಾವಿರ ರೂ. ವ್ಯಯಿಸಿ ಸೂರ್ಯಕಾಂತಿ ಬಿತ್ತನೆ ಮಾಡಿದರೂ ಬೆಳೆ ಕೈಗೂಡುತ್ತಿಲ್ಲ. ಸೂರ್ಯಕಾಂತಿ ಬೆಳೆ ಈ ಬಾರಿ ಸಂಪೂರ್ಣ ಹಾಳಾಗಿದೆ.

 ರುದ್ರಪ್ಪ,
ಸೂರ್ಯಕಾಂತಿ ಬೆಳೆಗಾರ, ಕಡೂರು

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News