ಕ್ರಿಶ್ಚಿಯನ್ನರ ವಿರುದ್ಧ ಗಾಂಧಿ

Update: 2017-08-20 18:43 GMT

ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾವ ಹೊಂದಿರುವ ಆರೆಸ್ಸೆಸ್ ಅಥವಾ ಅದರ ಸಂಘಟನೆಗಳು ಈ ಜಾಹೀರಾತನ್ನು ನೀಡಿದ್ದರೆ ಪರವಾಗಿರಲಿಲ್ಲ. ಆದರೆ, ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿ ಸರಕಾರ ನಡೆಸುತ್ತಿದ್ದರೂ ಕೂಡಾ, ಒಂದು ಸರಕಾರ ಇಂತಹ ಜಾಹೀರಾತು ನೀಡುವಂತಿಲ್ಲ, ನೀಡಬಾರದು.


ಭಾಗ-1

ಮಹಾತ್ಮಾಗಾಂಧಿಗೆ ಈಗ ಒಂದು ಹೊಸ ಕೆಲಸ. ಭಾರತ ಸರಕಾರದ ಸ್ವಚ್ಛತಾ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡ ಮೂರು ವರ್ಷಗಳ ಬಳಿಕ, ಅವರು ಈಗ ಜಾರ್ಖಂಡ್ ಸರಕಾರದ ಮತಾಂತರ ವಿರೋಧಿ ಅಭಿಯಾನದ ಮುಖ್ಯ ವಕ್ತಾರ ಹಾಗೂ ಚಿಹ್ನೆಯಾಗಿ ನೇಮಕಗೊಂಡಿದ್ದಾರೆ.

ಮತಾಂತರ ಮತ್ತು ಆದಿವಾಸಿ ಹಾಗೂ ದಲಿತರ ಮತಾಂತರ ಪ್ರಯತ್ನಗಳಿಗಾಗಿ ಕ್ರಿಶ್ಚಿಯನ್ ಮಿಶನರಿಗಳನ್ನು ಖಂಡಿಸುವ ಗಾಂಧಿಯವರ ಮಾತುಗಳನ್ನು ಉದ್ಧರಿಸಿ ರಾಜ್ಯದ ಎಲ್ಲ ವರ್ತಮಾನ ಪತ್ರಿಕೆಗಳಲ್ಲಿ ಒಂದು ಪೂರ್ಣ ಪುಟದ ಜಾಹೀರಾತನ್ನು ಪ್ರಕಟಿಸುವ ಮೂಲಕ ಜಾರ್ಖಂಡ್ ಸರಕಾರ ಕಾನೂನು ಉಲ್ಲಂಘನೆಯ ಇನ್ನೊಂದು ಕೃತ್ಯ ಎಸಗಿದೆ. ತನ್ನ ಕೈಯಲ್ಲಿ ಕೋಲು ಹಿಡಿದುಕೊಂಡು ಮುಗುಳ್ನಗುತ್ತ ನಡೆಯುತ್ತಿರುವ ಗಾಂಧಿಯ ಚಿತ್ರದೊಂದಿಗೆ ಪ್ರಕಟವಾಗಿರುವ ಗಾಂಧಿಯವರ ಮಾತುಗಳ ಉದ್ಧರಣತಿ (ಕೊಟೇಶನ್) ಹಾದಿ ತಪ್ಪಿಸುವಂತಿದೆ ಮತ್ತು ತುಂಟತನದ್ದಾಗಿದೆ. ಅದು ತಪ್ಪು ಮತ್ತು ಗಾಂಧಿಯವರದಲ್ಲದ ಮಾತುಗಳನ್ನು ಅವರ ಬಾಯಿಯಿಂದ ಹೇಳಿಸಿದೆ.

ನಾವು ಮೊದಲು ಆ ಜಾಹೀರಾತನ್ನು ಗಮನಿಸೋಣ. ಅದನ್ನು ಜಾರ್ಖಂಡ್ ಸರಕಾರ ಪ್ರಕಟಿಸಿದೆ ಮತ್ತು ಅದರಲ್ಲಿ ಜಾರ್ಖಂಡ್‌ನ ಮುಖ್ಯಮಂತ್ರಿಗಳ ಫೋಟೊ ಇದೆ. ಹಿಂದಿಯಲ್ಲಿರುವ ಆ ಜಾಹೀರಾತು ‘‘ಭಗವಾನ್ ಬಿರ್ಸಾ ಮುಂಡ ಮತ್ತು ಕಾರ್ತಿಕ್ ಒರಾವೊನ್‌ರ ಕನಸನ್ನು ನನಸಾಗಿಸಲು ಒಂದು ಪ್ರಯತ್ನ’’ ಎಂಬ ಘೋಷಣೆಯೊಂದಿಗೆ ಆರಂಭವಾಗುತ್ತದೆ.

ಗಾಂಧಿಯವರದ್ದು ಎನ್ನಲಾದ ಕೊಟೇಶನ್ ಹೀಗಿದೆ:
‘‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದು ಮೋಕ್ಷಕ್ಕೆ ಇರುವ ಏಕೈಕ ಮಾರ್ಗವೆಂದು ಕ್ರಿಶ್ಚಿಯನ್ ಮಿಶನರಿಗಳು ತಿಳಿಯುತ್ತಾರೆ. ನೀವ್ಯಾಕೆ ಮತಾಂತರವನ್ನು ನನ್ನಿಂದಲೇ ಅಥವಾ ಮಹಾದೇವ ದೇಸಾಯಿಂದಲೇ ಆರಂಭಿಸಬಾರದು? ನೀವ್ಯಾಕೆ ಸರಳ, ಮುಗ್ಧ, ನಿರಕ್ಷರಿ, ಬಡ ಹಾಗೂ ಅರಣ್ಯವಾಸಿ ಗಳ ಮತಾಂತರಕ್ಕೆ ಒತ್ತು ನೀಡುತ್ತೀರಿ? ಈ ಜನರಿಗೆ ಯೇಸು ಮತ್ತು ಮುಹಮ್ಮದ್ ನಡುವಣ ವ್ಯತ್ಯಾಸ ಗೊತ್ತಿಲ್ಲ ಮತ್ತು ಇವರು ನಿಮ್ಮ ಬೋಧನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆಯೂ ಇಲ್ಲ. ಇವರು ಹಸುಗಳ ಹಾಗೆ, ಮೂಕರು ಮತ್ತು ಸರಳ ಜೀವಿಗಳು. ನೀವು ಕ್ರಿಶ್ಚಿಯನ್ನರಾಗಿ ಮತಾಂತರಿಸುವ ಈ ಸರಳ, ಬಡ, ದಲಿತ ಮತ್ತು ಅರಣ್ಯವಾಸಿ ಜನಗಳು ಮತಾಂತರಗೊಳ್ಳುವುದು ಅನ್ನಕ್ಕಾಗಿ ಮತ್ತು ಅವರ ಹೊಟ್ಟೆಗಾಗಿಯೇ ಹೊರತು ಯೇಸುವಿಗಾಗಿ ಅಲ್ಲ’’.

ಒಂದು ಕ್ಷಣ ಗಾಂಧೀಜಿ ವಿಷಯವನ್ನು ಬದಿಗಿಡೋಣ. ಅವರು ಏನೇ ಹೇಳಿರಲಿ ಅಥವಾ ಅವರಿಗೆ ಏನೇ ಅನ್ನಿಸಿರಲಿ. ಜಾರ್ಖಂಡ್ ಸರಕಾರ ಮತ್ತು ಮುಖ್ಯಮಂತ್ರಿ ಜಾಹೀರಾತನ್ನು ಹಿಂದಕ್ಕೆ ಪಡೆಯಬೇಕು ಮತ್ತು ಅದು ಕ್ರಿಶ್ಚಿಯನ್ ಧಾರ್ಮಿಕ ಸಂಸ್ಥೆಗಳನ್ನು ನೇರವಾಗಿ ಗುರಿ ಮಾಡಿರುವುದರಿಂದ ಜಾರ್ಖಂಡ್ ಮತ್ತು ಭಾರತದ ಕ್ರಿಶ್ಚಿಯನ್ನರಲ್ಲಿ ಕ್ಷಮೆ ಕೇಳಬೇಕು. ಸಮಾಜದ ಒಂದು ವರ್ಗದ ಮೇಲೆ ದಾಳಿ ನಡೆಸಲು ಆಡಳಿತ ಯಂತ್ರದ ದುರುಪಯೋಗ ಎಷ್ಟೊಂದು ನಾಚಿಕೆಗೇಡು ಎಂದರೆ ಇದು ನಿಮ್ಮನ್ನು ಉಸಿರುಗಟ್ಟಿಸುತ್ತದೆ. ಮಿಶನರಿಗಳು ಸೇರಿದಂತೆ ಕ್ರಿಶ್ಚಿಯನರು ಈ ದೇಶದ ಕಾನೂನುಬದ್ಧ ನಾಗರಿಕರು ಮತ್ತು ಸರಕಾರಕ್ಕೆ ತೆರಿಗೆ ಕೊಡುವವರು. ಈ ಜಾಹೀರಾತಿಗೆ ರಾಜ್ಯದ ಬೊಕ್ಕಸದಿಂದ ಹಣ ನೀಡಲಾಗಿದೆ. ಅಂದರೆ, ಕ್ರಿಶ್ಚಿಯನ್ನರ ಹಣವನ್ನೇ ಬಳಸಿ ಅವರ ವಿರುದ್ಧವೇ ಅಪನಂಬಿಕೆ, ಕೆಟ್ಟ ಭಾವನೆ ಹಾಗೂ ದ್ವೇಷವನ್ನು ಹುಟ್ಟು ಹಾಕಲಾಗುತ್ತಿದೆ. ಇದು ಅವರ ಗೋರಿಯನ್ನು ಸ್ವತಃ ಅವರೇ ತೋಡಿಕೊಳ್ಳುವಂತೆ ಮಾಡಲಾಗುತ್ತಿದೆ ಅಂತ ಅನಿಸಿದರೆ ತಪ್ಪಲ್ಲ.

ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾವ ಹೊಂದಿರುವ ಆರೆಸ್ಸೆಸ್ ಅಥವಾ ಅದರ ಸಂಘಟನೆಗಳು ಈ ಜಾಹೀರಾತನ್ನು ನೀಡಿದ್ದರೆ ಪರವಾಗಿರಲಿಲ್ಲ. ಆದರೆ, ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿ ಸರಕಾರ ನಡೆಸುತ್ತಿದ್ದರೂ ಕೂಡಾ, ಒಂದು ಸರಕಾರ ಇಂತಹ ಜಾಹೀರಾತು ನೀಡುವಂತಿಲ್ಲ, ನೀಡಬಾರದು.

ಎರಡನೆಯದಾಗಿ ಮತ್ತು ಇದಕ್ಕಿಂತ ಹೆಚ್ಚು ಮುಖ್ಯವಾಗಿ, ಸರಕಾರವು ಆದಿವಾಸಿ ಗಳನ್ನು ಮತ್ತು ದಲಿತರನ್ನು ತಮ್ಮ ಸ್ವಂತ ಬುದ್ಧಿಯೇ ಇಲ್ಲದ ಮೂಕರು, ಅಜ್ಞಾನಿಗಳು ಮತ್ತು ಪೆದ್ದರು ಎಂದು ಕರೆಯುವ ಮೂಲಕ ಅವರನ್ನು ಅವಮಾನಿಸುತ್ತಿದೆ. ತನ್ನ ಪೂರ್ವಾಗ್ರಹವನ್ನು ತೋಡಿಕೊಳ್ಳಲು ಅದು ಗಾಂಧಿಯಂತಹ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಬಳಸಿಕೊಂಡರೂ ಕೂಡ, ಸರಕಾರ ಅದಿವಾಸಿಗಳಿಗೆ ಹಾಗೂ ದಲಿತರಿಗೆ ಮಾಡಿದ ಅವಮಾನ ಅವಮಾನವೇ.

ಗಾಂಧೀಜಿಗೆ, ಒಬ್ಬ ವ್ಯಕ್ತಿಯಾಗಿ ಆದಿವಾಸಿಗಳು ಹಾಗೂ ದಲಿತರ ಬಗ್ಗೆ ತನ್ನದೇ ಆದ ಅಭಿಪ್ರಾಯಗಳನ್ನು ಹೊಂದಿರುವ ಹಕ್ಕಿದೆ. ಆದರೆ, ಈ ವಿಷಯದಲ್ಲಿ ಗಾಂಧಿಯವರ ಅಭಿಪ್ರಾಯವನ್ನು ಅನುಮೋದಿಸುವ ಮೂಲಕ, ಜಾರ್ಖಂಡ್‌ನ ಬಿಜೆಪಿ ಸರಕಾರ ಶಾಶ್ವತವಾಗಿ ‘ಪ್ರೌಢರಲ್ಲದ’ (ಜುವೆನೈಲ್) ಆದಿವಾಸಿಗಳ ಮತ್ತು ದಲಿತರ ಸಂರಕ್ಷಕ ತಾನೆಂದು ಪ್ರದರ್ಶಿಸಿದಂತಾಗಿದೆ.

ಈಗ ಆ ಜಾಹೀರಾತಿನ ಸಂದರ್ಭವನ್ನು ಅರ್ಥ ಮಾಡಿಕೊಳ್ಳೋಣ. ಮತಾಂತರ ವನ್ನು ಅಪರಾಧವೆಂದು ಘೋಷಿಸುವ ಒಂದು ಮಸೂದೆಯನ್ನು ಮಾಡಲು ರಾಜ್ಯ ಸರಕಾರ ಇತ್ತೀಚೆಗೆ ನಡೆಸಿದ ಒಂದು ಪ್ರಯತ್ನದ ಹಿನ್ನೆಲೆಯಲ್ಲಿ ಈ ಜಾಹೀರಾತು ಪ್ರಕಟವಾಗಿದೆ. ಚೋಟಾ ನಾಗ್ಪುರ್ ವಕ್ಕಲು ಮಸೂದೆ ಮತ್ತು ಸಂತಾಲ್‌ಪರಗಣ ವಕ್ಕಲು ಮಸೂದೆಯ ಮೂಲ ತತ್ವಗಳಲ್ಲಿ ಸರಕಾರ ಮಾಡಿರುವ ಬದಲಾವಣೆಗಳ ವಿರುದ್ಧ ವ್ಯಕ್ತವಾದ ಜನಾಕ್ರೋಶದಿಂದ ಜನರ ಮನವನ್ನು ಬೇರೆಡೆಗೆ ಸೆಲೆಯಲು ಸರಕಾರ ಒಂದು ತಂತ್ರವಾಗಿ ಈ ಮಸೂದೆಯನ್ನು ತರುವ ಪ್ರಯತ್ನ ಮಾಡಿದೆ. ಆದಿವಾಸಿಗಳಿಗೆ ತಮ್ಮ ಜಮೀನಿನ ಮೇಲಿರುವ ಹಕ್ಕುಗಳನ್ನು ದುರ್ಬಲಗೊಳಿಸುವ ಸರಕಾರದ ಈ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ಜಾರ್ಖಂಡ್ ಜನತೆಯ ಪರವಾಗಿ ಅಲ್ಲಿಯ ಚರ್ಚ್ ನಿಂತಿತ್ತು. ಅಂದಿನ ಲಾಗಾಯ್ತು ಚರ್ಚ್‌ನ ಮೇಲೆ ಸರಕಾರ ಮತ್ತು ಬಿಜೆಪಿ ಹದ್ದಿನ ಕಣ್ಣು ಇಟ್ಟಿದೆ. ಆರೆಸ್ಸೆಸ್‌ನ ಸಹ ಸಂಘಟನೆಗಳು ಆದಿವಾಸಿ ಸರಣರ ಮತ್ತು ಕ್ರಿಶ್ಚಿಯನರ ಮಧ್ಯೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಲೇ ಬಂದಿವೆ.

ಬಿರ್ಸಾ ಮುಂಡಾ ಮತ್ತು ಕಾರ್ತಿಕ್ ಒರಾವೊನ್‌ರ ಹೆಸರನ್ನು ಬಳಸುವುದು ಜಾರ್ಖಂಡ್‌ನ ಜನರನ್ನು ಗಲಿಬಿಲಿಗೊಳಿಸುವುದಕ್ಕಾಗಿ. ಕ್ರಿಶ್ಚಿಯನ್ ಮಿಶನರಿಗಳ ಚಟುವಟಿಕೆಗಳನ್ನು ನಿಲ್ಲಿಸುವುದೇ ಆ ಜನರ ಕನಸು ಆಗಿದೆ ಎಂದು ಅವರು (ಸರಣರು) ನಂಬುವಂತೆ ಮಾಡಲಾಗುತ್ತಿದೆ. ಆದರೆ ಸತ್ಯ ಬೇರೆಯೇ ಇದೆ. ‘‘ಆದಿವಾಸಿ ಹಿಂದೂ ನಹೀ ಹೆ’’ ಎನ್ನುವ ಪುಸ್ತಕದಲ್ಲಿ ಕಾರ್ತಿಕ್ ಒರಾವೊನ್ ಹೀಗೆ ಹೇಳಿದ್ದಾರೆ. ‘‘ಆದಿವಾಸಿ ಸಮುದಾಯದಲ್ಲಿ ಹಿಂದೂ ದೇವ ದೇವತೆಗಳಿಗೆ ಅವಕಾಶವಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಹಿಂದೂಗಳು ದೇವರನ್ನು ನಂಬುತ್ತಾರೆ. ಆದರೆ ಆದಿವಾಸಿಗಳು ಪ್ರಕೃತಿಯನ್ನು ಪೂಜಿಸುತ್ತಾರೆ ಮತ್ತು ನಾಗಾ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಆದಿವಾಸಿಗಳು ಹಿಂದೂಗಳಲ್ಲ ಎಂದು ಜಬಲ್‌ಪುರದ ಉಚ್ಚನ್ಯಾಯಾಲಯ ಕೂಡ ಹೇಳಿದೆ’’.

ಒರಾವೊನ್‌ರ ಈ ಮಾತುಗಳನ್ನು ಜನರು ಓದುವುದು ಬಿಜೆಪಿಗೆ ಖಂಡಿತವಾ ಗಿಯೂ ಇಷ್ಟವಾಗಲಾರದು. ಹಾಗೆಯೇ ‘ಶುದ್ಧಿ’ (ಇಂದಿನ ‘ಘರ್‌ವಾಪ್‌ಸಿ’) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿಂದೂಗಳನ್ನು ಖಂಡಿಸುವ ಗಾಂಧಿಯನ್ನು ಕೂಡ ಅದು ಸೆನ್ಸಾರ್ ಮಾಡೀತು ಅವಕಾಶ ಸಿಕ್ಕಿದರೆ.

(ಮುಂದುವರಿಯುವುದು)

Writer - ಅಪೂರ್ವಾನಂದ್

contributor

Editor - ಅಪೂರ್ವಾನಂದ್

contributor

Similar News