ಆಧಾರ್‌ಗಾಗಿ ಮುಗಿಯದ ಜನರ ಪರದಾಟ: ಆಧಾರ್ ಟೋಕನ್ ಗಾಗಿ ಡಿಸಿ ಕಚೇರಿಗೆ ಮುಗಿಬಿದ್ದ ಜನ!

Update: 2017-08-22 11:17 GMT

ಮಂಗಳೂರು, ಆ.21: ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳುತ್ತಲೇ ಪ್ರತಿಯೊಂದು ಯೋಜನೆ, ಅರ್ಜಿ, ಆಡಳಿತಾತ್ಮಕ ಸಮಸ್ಯೆಗಳಿಗೂ ಆಧಾರನ್ನೇ ಮುಖ್ಯವಾಗಿಸಿಕೊಂಡಿರುವುದರಿಂದ ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿಗಾಗಿ ಜನಸಾಮಾನ್ಯರ ಗೋಳು ಕೂಡಾ ಮುಗಿಯುವಂತೆ ಕಾಣುತ್ತಿಲ್ಲ.

ದ.ಕ. ಜಿಲ್ಲೆಯ 23 ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿ, ಆಧಾರ್ ನೋಂದಣಿಗೆ ಟೋಕನ್‌ಗಳನ್ನು ನೀಡಿ ಪ್ರಕ್ರಿಯೆ ನಡೆಯುತ್ತಿದ್ದರೂ, ಜನರು ಮಾತ್ರ ದಿನನಿತ್ಯ ಪರದಾಡುವಂತಾಗಿದೆ. ಇದಕ್ಕೆ ಇಂದು ಜಿಲ್ಲಾಧಿಕಾರಿ ಕಚೇರಿಯೇ ಸಾಕ್ಷಿಯಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಟೋಕನ್‌ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಜನರು ಬೆಳಗ್ಗೆ ಸುಮಾರು 6 ಗಂಟೆಗೆ ಆಗಮಿಸಿದ್ದರು. ಕಚೇರಿಯಲ್ಲಿ ಟೋಕನ್ ಕೊಡಲು ಆರಂಭವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಿಂದ ಸರತಿ ಸಾಲಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಕ್ಕಳು, ವಯೋವೃದ್ಧರು, ಗರ್ಭಿಣಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದರು. ಕಚೇರಿಯಲ್ಲಿ ಬೆಳಗ್ಗೆ 9.30ರಿಂದ ಟೋಕನ್ ನೀಡುವ ಕಾರ್ಯ ಆರಂಭವಾಗಿತ್ತು.

ಆರಂಭದಲ್ಲಿ ಎರಡು ಸಿಬ್ಬಂದಿಗಳಿಂದ ಮಾತ್ರವೇ ಟೋಕನ್ ನೀಡಲು ಆರಂಭಿಸಿದ್ದ ಕಾರಣ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದ ಜನರು ಆಡಳಿತ ವ್ಯವಸ್ಥೆಯ ವಿರುದ್ಧವೇ ಹಿಡಿಶಾಪ ಹಾಕಲಾರಂಭಿಸಿದ್ದರು. 10 ಗಂಟೆಯ ಬಳಿಕ ಜನಸ್ತೋಮವನ್ನು ನೋಡಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಅವರು ಮತ್ತೆ ಹೆಚ್ಚುವರಿ ನಾಲ್ಕು ಸಿಬ್ಬಂದಿಗಳ ವ್ಯವಸ್ಥೆ ಮಾಡಿದರು. ಆದರೆ ಜನರ ಆಗಮನ ಮತ್ತಷ್ಟು ಹೆಚ್ಚುತ್ತಿರುವುದನ್ನು ಕಂಡು ಮತ್ತೆ ಹೆಚ್ಚುವರಿ ನಾಲ್ಕು ಸಿಬ್ಬಂದಿಗಳನ್ನು ಒದಗಿಸಲು ಮುಂದಾದರು. ಆದರೆ ಮುಂಜಾನೆಯಿಂದ ಕಾದು ಕಾದು ಸುಸ್ತಾಗಿದ್ದ ವಯೋವೃದ್ದರು, ಮಕ್ಕಳು ಕುಳಿತುಕೊಳ್ಳಲು ಜಾಗವಿಲ್ಲದೆ, ಸರತಿ ಸಾಲಿನಲ್ಲೇ ನಿಂತು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದರು.

'ನಾನು ಬೆಳಗ್ಗೆ ಏಳು ಗಂಟೆಯಿಂದ ಕಾಯುತ್ತಿದ್ದೇನೆ. ನೀರುಮಾರ್ಗದಿಂದ ಬಂದಿದ್ದೇನೆ. ನನ್ನ ಆಧಾರ್ ಕಾರ್ಡ್‌ನಲ್ಲಿ ಆಗಿರುವ ತಪ್ಪನ್ನು ತಿದ್ದುಪಡಿಗೋಸ್ಕರ ಬಂದಿದ್ದೇನೆ' ಎಂದು ಶಾಲಿನಿ ವಾಝ್ ಎಂಬವರು ಬೇಸರಿಸಿದರು.

'ನಾನು ಮಾರುಕಟ್ಟೆಯಲ್ಲಿ ಕೆಲಸಕ್ಕೆ ಹೋಗುವವ. ಬೆಳಗ್ಗೆ 7 ಗಂಟೆಗೆ ಬಂದಿದ್ದೇನೆ. ಇವತ್ತು ಒಂದು ದಿನದ ದುಡಿಮೆಯೇ ಹೋಯಿತು. ನಾನು ಬರುವಾಗಲೇ ಇಲ್ಲಿ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು' ಎಂದು ಬೆಂಗ್ರೆಯ ಮುಹಮ್ಮದ್ ನೌಶೀರ್ ಅಸಮಾಧಾನ ವ್ಯಕ್ತಪಡಿಸಿದರು.

'ಆಧಾರ್ ಕಾರ್ಡನ್ನು ಎಲ್ಲದಕ್ಕೂ ಕಡ್ಡಾಯಗೊಳಿಸುತ್ತಿದ್ದಾರೆ. ಆಧಾರ್ ಇಲ್ಲದಿದ್ದರೆ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನೇ ಮಾಡದೆ ಈ ರೀತಿ ಆಧಾರ್ ಮುಖ್ಯವಾಗಿಸಿದರೆ ನಮ್ಮಂತವರು ದುಡಿಯುವುದೇ ಅಥವಾ ಇಲ್ಲಿ ಕ್ಯೂನಲ್ಲಿ ನಿಲ್ಲುವುದೇ' ಎಂದು ಮೂಲತ: ಮಹಾರಾಷ್ಟ್ರದವರಾದ ಪ್ರಸ್ತುತ ಎಂಸಿಎಫ್‌ನಲ್ಲಿ ಕೆಲಸ ಮಾಡುತ್ತಿರುವ ಯಾದವ್ ಎಂಬವರು ಆಕ್ರೋಶ ವ್ಯಕ್ತಪಡಿಸಿದರು.

'ನಾನು ಆಧಾರ್ ಕಾರ್ಡ್ ಮಾಡಿಸಿದ್ದೇನೆ. ಇದೀಗ ಮಗಳ ಆಧಾರ್‌ಗಾಗಿ ಅಲೆದಾಡುತ್ತಿದ್ದೇನೆ. ಹಿಂದೆ ಮಿನಿ ವಿಧಾನಸೌಧದಲ್ಲಿ ಜುಲೈ 24ರಂದು ಟೋಕನ್ ಕೊಡುವ ಸಂದರ್ಭ ಕಾದು ಸಿಕ್ಕಿರಲಿಲ್ಲ. ಇದೀಗ ಇವತ್ತು ಬೆಳಗ್ಗೆ 6 ಗಂಟೆಯ ಸುಮಾರಿಗೆ ಇಲ್ಲಿ ಆಗಮಿಸಿದ್ದೇನೆ. ಅದಾಗಲೇ ಇಲ್ಲಿ ಜನ ಸೇರಿದ್ದರು. ಕಾದು ಕಾದು ಸಾಕಾಯಿತು. ನನಗೆ ಸೆಪ್ಟಂಬರ್ 9ಕ್ಕೆ ಟೋಕನ್ ದೊರಕಿದೆ' ಎಂದು ರಾಜು ಯಾದವ್ ಎಂಬವರು ಅಸಮಾಧಾನಿಸಿದರು.

'ನನ್ನ ತಮ್ಮನ ಮಗಳ ಆಧಾರ್ ಕಾರ್ಡ್‌ಗಾಗಿ ಅಲೆದಾಡಿ ಸಾಕಾಗಿ ಹೋಯಿತು. ಆತನ ಇತರ ಮೂರು ಮಕ್ಕಳಿಗೆ ಆಧಾರ್ ಕಾರ್ಡ್ ಆಗಿದೆ. ಇದೀಗ ಇನ್ನೋರ್ವ ಮಗಳು ಚೈತ್ರಾಳಿಗೆ ಮಾಡಿಸಿದ್ದರೂ ಕಾರ್ಡ್ ಬಂದಿಲ್ಲ. ಅದಕ್ಕಾಗಿ ಮತ್ತೆ ಮತ್ತೆ ಅಲೆದಾಡುತ್ತಿದ್ದೇನೆ. ವಿಳಾಸ ಸರಿ ಇಲ್ಲ ಎಂಬ ನೆಪವೊಡ್ಡಿ ಅಲೆದಾಡಿಸಲಾಗುತ್ತಿದೆ. ಇದರಿಂದಾಗಿ ಮಗುವಿಗೆ ಇಂದು ಶಾಲೆಗೂ ಹೋಗಲಾಗಿಲ್ಲ. ಕುಂಜತ್ತಬೈಲಿನ ಜ್ಯೋತಿನಗರ ಸೊಸೈಟಿ ಸಿಬ್ಬಂದಿಗಳು ಸೂಕ್ತ ಮಾಹಿತಿಯನ್ನೂ ನೀಡದೆ ಸತಾಯಿಸುತ್ತಾರೆ. ನಾನು ಕೆಲಸ ಬಿಟ್ಟು ಸುತ್ತಾಡುವಂತಾಗಿದೆ' ಎಂದು ಶಶಿಕಲಾ ಎಂಬವರು ಅಸಹನೆ ತೋರಿದರು.

ವ್ಯವಸ್ಥೆ ಇದ್ದರೂ ಜನ ಅದನ್ನು ಉಪಯೋಗಿಸುತ್ತಿಲ್ಲ!

ಆಧಾರ್ ಕಾರ್ಡ್‌ಗಾಗಿ ದ.ಕ. ಜಿಲ್ಲೆಯಲ್ಲಿ 23 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇವತ್ತು ಇಲ್ಲಿ ಟೋಕನ್ ಪಡೆಯಲು ಬಂದವರಲ್ಲಿ ಶೇ. 60ರಷ್ಟು ಮಂದಿ ತಿದ್ದುಪಡಿಗಾಗಿ ಬಂದವರು. ತಿದ್ದುಪಡಿ ವ್ಯವಸ್ಥೆ ಮಂಗಳೂರು ವನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಮಾಡಲಾಗಿದ್ದರೂ ಜನ ಅಲ್ಲಿ ಹೋಗುತ್ತಿಲ್ಲ. ಅಲ್ಲಿ ಟೋಕನ್ ಪಡೆದು ಬಹಳ ದಿನ ಕಾಯಬೇಕೆಂಬ ಆತಂಕದಿಂದ ಇದೀಗ ಜನ ಇಲ್ಲಿ ಸೇರಿದ್ದಾರೆ. ಅವರೆಲ್ಲರಿಗೂ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಚೇರಿ ಅವಧಿ 10 ಗಂಟೆಗಾಗಿದ್ದರೂ, ಟೋಕನ್ ನೀಡುವುದಕ್ಕಾಗಿ ಇಂದು ಬೆಳಗ್ಗೆ 9 ಗಂಟೆಗೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆರಂಭದಲ್ಲಿ ಎರಡು ಸಿಬ್ಬಂದಿಗಳಿದ್ದರು. ಬಳಿಕ ಆ ಸಂಖ್ಯೆಯನ್ನು ಹೆಚ್ಚಿಸಿ 10 ಸಿಬ್ಬಂದಿಗಳ ವ್ಯವಸ್ಥೆ ಮಾಡಲಾಗಿದೆ. ದಿನವೊಂದಕ್ಕೆ ಕೇಂದ್ರವೊಂದರಲ್ಲಿ 30 ಮಂದಿಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶವಿರುತ್ತದೆ. ಪಾಂಡೇಶ್ವರ ಅಂಚೆ ಕಚೇರಿಯಲ್ಲೂ ವ್ಯವಸ್ಥೆ ಇದೆ. ಆದರೂ ಜನ ಅಲ್ಲಿ ಹೋಗುತ್ತಿಲ್ಲ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News