ಹೆಬ್ರಿ ಭೋಜ ಶೆಟ್ಟಿ ಹತ್ಯೆ ಪ್ರಕರಣ : ಶಂಕಿತ ನಕ್ಸಲ್ ವೀರಮಣಿ ಉಡುಪಿ ಕೋರ್ಟ್‌ಗೆ ಹಾಜರು

Update: 2017-08-21 10:21 GMT

ಉಡುಪಿ, ಆ.21: ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಕ್ಸಲ್ ಈಶ್ವರ ಯಾನೆ ವೀರಮಣಿಯನ್ನು ಹೆಬ್ರಿ ಪೊಲೀಸರು ಸೋಮವಾರ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.

2008ರ ಮೇ 15ರಂದು ಹೆಬ್ರಿಯ ಶಿಕ್ಷಕ ಭೋಜ ಶೆಟ್ಟಿಯನ್ನು ನಕ್ಸಲರ ತಂಡ ಗುಂಡು ಹಾರಿಸಿ ಕೊಲೆ ಮಾಡಿದ್ದು, ಇದರಲ್ಲಿ ಒಟ್ಟು 11 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವೀರಮಣಿ ಈ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ರೂಪಿಸಿದ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಇವರನ್ನು ತಮಿಳುನಾಡು ಪೊಲೀಸರು 2015ರ ಮೇ 4ರಂದು ಕೊಯಮುತ್ತೂರಿನಲ್ಲಿ ಬಂಧಿಸಿದ್ದರು.

ಇದೀಗ ಹೆಬ್ರಿ ಪೊಲೀಸರು ಭೋಜ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಕೊಯಮುತ್ತೂರು ಜೈಲಿನಲ್ಲಿದ್ದ ವೀರಮಣಿಯನ್ನು ಬಾಡಿವಾರೆಂಟ್ ಪಡೆದು ಉಡುಪಿಗೆ ಕರೆ ತಂದಿದ್ದು, ಇಂದು ಬೆಳಗ್ಗೆ ಅವರನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅವರ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು, ದೋಷಾರೋಪಣೆ ಮಾಡುವ ಮತ್ತು ಅದಕ್ಕೆ ಉತ್ತರಿಸುವ ದಿನಾಂಕವನ್ನು ನ.15ಕ್ಕೆ ಮುಂದೂಡಿ ಆದೇಶ ನೀಡಿದರು.

ಬಳಿಕ ವೀರಮಣಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೊಯಮೂತ್ತುರಿಗೆ ಕರೆದುಕೊಂಡು ಹೋಗಲಾಯಿತು. ಬೆಂಗಳೂರಿನ ಹಲ್ಸೂರು ತಮಿಳು ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರ ವಿರುದ್ಧ ಕೇರಳದಲ್ಲಿ ನಾಲ್ಕು, ತಮಿಳುನಾಡಿನಲ್ಲಿ ಐದು ಮತ್ತು ಕರ್ನಾಟಕದಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. ಆರೋಪಿ ಪರ ವಕೀಲ ಉಡುಪಿಯ ಶಾಂತರಾಮ್ ಶೆಟ್ಟಿ ವಾದಿಸಿದರು.

ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿದ ವೀರಮಣಿ

ವೀರಮಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಾಪಾಸ್ಸು ಹೊರಗಡೆ ಕರೆದುಕೊಂಡು ಬರುವಾಗ ನ್ಯಾಯಾಲಯದ ಆವರಣದಲ್ಲಿ ಅವರು, ‘ಶರಣಾಗತಿ ತಿರಸ್ಕರಿಸೋಣ, ಅಮರ ವೀರರ ಆಶಯವನ್ನು ಈಡೇರಿಸೋಣ. ನಕ್ಸಲೀಯರು ದೇಶಭಕ್ತರು. ಹಿಂದಿ ಹೇರಿಕೆಯ ವಿರುದ್ಧ ಹೋರಾಡೋಣ. ಮಾವೋವಾದಿ ಜಿಂದಾಬಾದ್. ಕ್ರಾಂತಿಯನ್ನು ಯಾವುದೇ ಎನ್‌ಕೌಂಟರ್ ಗಳಿಂದಲೂ ತಡೆಯಲು ಆಗುವುದಿಲ್ಲ. ಮಲೆನಾಡು ಪ್ರದೇಶದಿಂದ ಆದಿವಾಸಿ ಜನರನ್ನು ಎತ್ತಗಂಡಿ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಕ್ರಾಂತಿ ನಿಲ್ಲುವುದಿಲ್ಲ’ ಎಂದು ಘೋಷಣೆಗಳನ್ನು ಕೂಗಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News