ಧರೆಗುರುಳಿದ ಶತಮಾನ ಕಂಡ ಆಲದ ಮರಕ್ಕೆ ಮರುಜೀವ: 70ಸಾವಿರ ರೂ. ವ್ಯಯಿಸಿ ಬನ್ನಂಜೆಯಿಂದ ಮಣಿಪಾಲಕ್ಕೆ ಶಿಫ್ಟ್

Update: 2017-08-21 12:05 GMT

ಉಡುಪಿ, ಆ.21: ಬನ್ನಂಜೆ ರಸ್ತೆ ಬದಿಯಲ್ಲಿ ಗಾಳಿಮಳೆಗೆ ಬಿದ್ದ ಶತಮಾನ ಕಂಡ ಬೃಹತ್ ಆಲದ ಮರವನ್ನು ಮಣಿಪಾಲ ಎಂಐಟಿ ಹಾಗೂ ಉದ್ಯಾವರ ರೋಟರಿ ಕ್ಲಬ್‌ನವರು ಟ್ರೈಲರ್ ಮೂಲಕ ಸಾಗಿಸಿ ಮಣಿಪಾಲದಲ್ಲಿ ನೆಡುವ ಮೂಲಕ ಮರುಜೀವ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಭಾರೀ ಗಾಳಿಮಳೆಗೆ ಬನ್ನಂಜೆ ತಾಲೂಕು ಕಚೇರಿ ರಸ್ತೆಯಲ್ಲಿದ್ದ 100 ವರ್ಷ ಹಳೆಯ ಆಲದ ಮರವು ಧರೆಗೆ ಉರುಳಿ ಬಿದ್ದಿತ್ತು. ಇದನ್ನು ಗಮನಿಸಿದ ಸಮಾಜ ಸೇವಕ ವಿಶು ಶೆಟ್ಟಿ ವನಮಹೋತ್ಸವ ಆಚರಿಸುತ್ತಿದ್ದ ಉದ್ಯಾವರ ರೋಟರಿ ಕ್ಲಬ್‌ನವರ ಗಮನಕ್ಕೆ ತಂದರು. ಉದ್ಯಾವರ ರೋಟರಿ ಅಧ್ಯಕ್ಷ ತೇಜಸ್ವರ್ ರಾವ್ ಈ ಮರದ ಬಗ್ಗೆ ಮಣಿಪಾಲ ಎಂಐಟಿಯ ಪ್ರೊಫೆಸರ್ ಬಾಲಕೃಷ್ಣ ಮದ್ದೋಡಿ ಅವರಲ್ಲಿ ಪ್ರಸ್ತಾಪಿಸಿದರು.

ಮಣಿಪಾಲ ಎಂಐಟಿ ಆವರಣದಲ್ಲಿ ರಾಷ್ಟ್ರೀಯ ಮರವಾಗಿರುವ ಆಲದ ಮರ ಇಲ್ಲದ ಕಾರಣ, ಅದನ್ನು ಅಲ್ಲಿಂದ ಸಾಗಿಸಿ ಆವರಣದಲ್ಲಿ ನೆಡುವ ಇಂಗಿತವನ್ನು ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ವ್ಯಕ್ತಪಡಿಸಿದ್ದರು. ಅದರಂತೆ ಇಂದು ಅರಣ್ಯ ಇಲಾಖೆಯ ಅನುಮತಿ ಪಡೆದು ಮರದ ರೆಂಬೆಗಳನ್ನು ಕತ್ತರಿಸಿ, ಎರಡು ಕ್ರೇನ್‌ಗಳನ್ನು ಬಳಸಿ ಟ್ರೇಲರ್ ಮೂಲಕ ಮಣಿಪಾಲಕ್ಕೆ ಸಾಗಿ ಸಲಾಯಿತು. ಮಧ್ಯಾಹ್ನ ಮರವನ್ನು ಎಂಐಟಿ ಆವರಣದಲ್ಲಿ ಹೊಂಡ ತೆಗೆದು ಕೆಂಪು ಮಣ್ಣು ಹಾಕಿ ನೆಡಲಾಯಿತು. ಈ ವೇಳೆ ಉಡುಪಿ ಅರಣ್ಯ ರಕ್ಷಕ ದೇವರಾಜ ಪಾಣ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News