ಮತೀಯ ಭಯೋತ್ಪಾದಕ ಸಂಘಟನೆಗಳನ್ನು ನಿಯಂತ್ರಿಸಲು ಸರಕಾರದ ಹಿಂದೇಟು: ನಳಿನ್

Update: 2017-08-22 12:20 GMT

ಪುತ್ತೂರು, ಆ. 22: ಜಿಲ್ಲೆಯಲ್ಲಿ ಮತೀಯ ಭಯೋತ್ಪಾದಕ ಶಕ್ತಿಗಳಾದ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಓಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕಾಗಿ ರಾಜ್ಯ ಸರಕಾರ ಹಿಂದೇಟು ಹಾಕುತ್ತಿದೆ.

ಈ ಮತೀಯ ಭಯೋತ್ಪಾದಕ ಶಕ್ತಿಗಳು ಅಮಾಯಕ ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಸುವ ದೌರ್ಜನ್ಯವನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸುತ್ತದೆ. ಇಂತಹ ಶಕ್ತಿಗಳ ಯಾವುದೇ ಸವಾಲುಗಳನ್ನು ಎದುರಿಸಲು ಬಿಜೆಪಿ ಸಿದ್ಧ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳು ಮತೀಯ ಭಯೋತ್ಪಾದನೆಯನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪ್ರಯೋಗಿಸುತ್ತಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲರೂ ಮತೀಯವಾದಿ ಭಯೋತ್ಪಾದಕ ಸಂಘಟನೆ ಪಿಎಫ್‌ಐಗೆ ಸೇರಿದವರು. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಘಟನೆಗಳ ಕುರಿತು ಇನ್ನೂ ಮೃದು ಧೋರಣೆಯನ್ನು ಹೊಂದಿದ್ದಾರೆ ಎಂದು ನಳಿನ್ ಹೇಳಿದರು.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ಪ್ರಭಾವದ ಕಾರಣಕ್ಕಾಗಿ ಸಂಪೂರ್ಣ ಕುಸಿದು ಬಿದ್ದಿದೆ. ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿದುಕೊಳ್ಳುವ ಕೆಲಸ ಅಧಿಕಾರಸ್ಥ ರಾಜಕಾರಣಿಗಳಿಂದ ನಡೆಯುತ್ತಿದೆ. ನಿಜವಾದ ಕೋಮುವಾದಿ ಭಯೋತ್ಪಾದಕ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡಲು ಕ್ರಮ ಅನುಸರಿಸದೇ ಹಿಂದೂ ಸಂಘಟನೆಗಳನ್ನು ದಮನಿಸಲು ಸರಕಾರ ಮುಂದಾಗಿರುವುದು ದುರದೃಷ್ಟಕರ ಎಂದು ನಳಿನ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪುತ್ತೂರು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಯಿಲ ಕೇಶವ ಗೌಡ, ಸಹಕಾರಿ ಮುಂದಾಳು ಕಂಟ್ರಮಜಲು ಭಾಸ್ಕರ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News