ತ್ರಿವಳಿ ತಲಾಖ್ ಕುರಿತು ತೀರ್ಪು ನೀಡಿದ ಪೀಠದಲ್ಲಿದ್ದ ಕನ್ನಡಿಗ ನ್ಯಾ. ಅಬ್ದುಲ್ ನಝೀರ್

Update: 2017-08-22 13:42 GMT

ಹೊಸದಿಲ್ಲಿ, ಆ. 22 : ಮಂಗಳವಾರ ತ್ರಿವಳಿ ತಲಾಖ್ ಕುರಿತ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಪೀಠದಲ್ಲಿದ್ದ ಐವರು ನ್ಯಾಯಾಧೀಶರು ದೇಶದ ಐದು ಪ್ರಮುಖ ಧರ್ಮಗಳ ಅನುಯಾಯಿಗಳು. 

ಈ ಪೈಕಿ ಮುಖ್ಯ ನ್ಯಾಯಾಧೀಶ ಜೆ. ಎಸ್ . ಖೇಹರ್ ಅವರು ಸಿಖ್ ಧರ್ಮದವರಾಗಿದ್ದು ಈ ಪ್ರಮುಖ ಹುದ್ದೆಗೇರಿದ ಪ್ರಪ್ರಥಮ ಸಿಖ್ ನ್ಯಾಯಾಧೀಶರಾಗಿದ್ದಾರೆ. ನ್ಯಾ. ಉದಯ್ ಲಲಿತ್ ಹಿಂದೂ ಧರ್ಮದವರು. ನ್ಯಾ. ಕುರಿಯನ್ ಜೋಸೆಫ್ ಕ್ರೈಸ್ತ ಧರ್ಮೀಯರು. ನ್ಯಾ. ರೊಹಿಂಟನ್ ನಾರಿಮನ್ ಅವರು ಝೋರಾಸ್ಟ್ರಿಯನ್ ಧರ್ಮದವರು ( ಪಾರ್ಸಿ ). ನ್ಯಾ. ಅಬ್ದುಲ್ ನಝೀರ್ ಮುಸಲ್ಮಾನರು. 

ನ್ಯಾ. ಅಬ್ದುಲ್ ನಝೀರ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯವರು. 1983 ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ  ವಕೀಲಿ ವೃತ್ತಿ ಜೀವನ ಪ್ರಾರಂಭಿಸಿದ ನ್ಯಾ. ನಝೀರ್ ಅವರು 2003 ರಲ್ಲಿ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು.2004 ರಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರಾದರು. ಫೆಬ್ರವರಿ 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೆ ನೇರವಾಗಿ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ಮೂರನೇ ನ್ಯಾಯಾಧೀಶ ನ್ಯಾ. ನಝೀರ್ ಅವರು.  

ಬೆಳುವಾಯಿಯ ಫಕೀರ್ ಸಾಬ್ ಅವರ ಸುಪುತ್ರರಾದ ನಝೀರ್ ಅವರು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿ ಕಾಂ ಪದವಿ ಪಡೆದರು. ಬಳಿಕ ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಮಂಗಳವಾರ ನ್ಯಾ. ನಝೀರ್ ಹಾಗು ಮುಖ್ಯ ನ್ಯಾಯಾಧೀಶ ಜೆ. ಎಸ್ . ಖೇಹರ್ ಅವರು ತ್ರಿವಳಿ ತಲಾಖ್ ಅನ್ನು ಆರು ತಿಂಗಳು ಅಮಾನತಿನಲ್ಲಿಟ್ಟು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕಾನೂನು ರೂಪಿಸಲು ಆದೇಶಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಪೀಠದಲ್ಲಿದ್ದ ಉಳಿದ ಮೂವರು ನ್ಯಾಯಾಧೀಶರು ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದರು. ಇದರಿಂದಾಗಿ 3-2 ರ ಬಹುಮತದಿಂದ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ರದ್ದು ಪಡಿಸುವ ಆದೇಶ ಸುಪ್ರೀಂ ಕೋರ್ಟ್ ನಿಂದ ಬಂತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News