ರಶ್ಯದಲ್ಲಿ ವೀಸಾ ಸಂಸ್ಕರಣೆ ಗಣನೀಯ ಪ್ರಮಾಣದಲ್ಲಿ ಕಡಿತ: ಅಮೆರಿಕ ಘೋಷಣೆ

Update: 2017-08-22 13:43 GMT

ಮಾಸ್ಕೊ, ಆ. 22: ರಶ್ಯದಲ್ಲಿನ ತನ್ನ ವೀಸಾ ಸಂಸ್ಕರಣೆ ಸೇವೆಗಳನ್ನು ಅಮೆರಿಕ ಸೋಮವಾರ ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದೆ.

 ರಶ್ಯದಲ್ಲಿರುವ ತನ್ನ ರಾಯಭಾರ ಮತ್ತು ಕಾನ್ಸುಲರ್ ಕಚೇರಿಗಳ ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಬೇಕೆಂದು ರಶ್ಯ ಅಮೆರಿಕಕ್ಕೆ ಆದೇಶಿಸಿದ ಮೂರು ವಾರಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಈ ಕ್ರಮದಿಂದ ವಾಣಿಜ್ಯ ಉದ್ದೇಶದ ಪ್ರಯಾಣಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಬಳಿಕ ಅಮೆರಿಕ ಮತ್ತು ರಶ್ಯಗಳ ನಡುವಿನ ಸಂಬಂಧ ಸುಧಾರಿಸಬಹುದು ಎಂಬುದಾಗಿ ಹಲವರು ಯೋಚಿಸಿದ್ದರೂ, ಈಗ ಉಭಯ ದೇಶಗಳ ನಡುವಿನ ಸಂಬಂಧ ಶೀತಲ ಸಮರದ ಅವಧಿಯಲ್ಲಿ ಇದ್ದುದಕ್ಕಿಂತಲೂ ಹದಗೆಟ್ಟಿದೆ.

ರಶ್ಯಾದ್ಯಂತವಿರುವ ವಲಸಿಗರೇತರ ವೀಸಾ ಸಂಸ್ಕರಣೆಗಳನ್ನು ಬುಧವಾರ ನಿಲ್ಲಿಸಲಾಗುವುದು ಹಾಗೂ ಸೆಪ್ಟಂಬರ್ 1ರಂದು ಸೇವೆಗಳು ಪುನಾರಂಭಗೊಂಡಾಗ ಸೇವೆಗಳ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗುವುದು ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ಸೋಮವಾರದಿಂದ, ಅನಿರ್ದಿಷ್ಟ ಸಂಖ್ಯೆಯ ಭೇಟಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಹೇಳಿರುವ ರಾಯಭಾರ ಕಚೇರಿಯು, ಭೇಟಿಯನ್ನು ಮರು ನಿಗದಿಪಡಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಕೋಪದಿಂದ ಪ್ರತಿಕ್ರಿಯಿಸಿದ ರಶ್ಯ

ಅಮೆರಿಕದ ಈ ಕ್ರಮಕ್ಕೆ ಕೋಪದಿಂದ ಪ್ರತಿಕ್ರಿಯಿಸಿರುವ ರಶ್ಯ, ಇದು ರಶ್ಯನ್ನರನ್ನು ರಶ್ಯ ಅಧಿಕಾರಿಗಳ ವಿರುದ್ಧ ಎತ್ತಿಕಟ್ಟುವ ಅಮೆರಿಕದ ಹುನ್ನಾರವಾಗಿದೆ ಎಂದು ಆರೋಪಿಸಿದೆ.

‘‘ಈ ನಿರ್ಧಾರಗಳ ಮೂಲಕ, ರಶ್ಯ ಅಧಿಕಾರಿಗಳ ಕ್ರಮಗಳ ಬಗ್ಗೆ ರಶ್ಯ ನಾಗರಿಕರಲ್ಲಿ ಅಸಹನೆ ಸೃಷ್ಟಿಸುವ ಪ್ರಯತ್ನವನ್ನು ಅಮೆರಿಕದ ಅಧಿಕಾರಿಗಳು ಮಾಡಿದ್ದಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಶ್ಯದ ವಿದೇಶ ಸಚಿವ ಸರ್ಗಿ ಲವ್ರೊವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News