ಜೆಡಿಯು ಒಡೆಯಲು ಆರ್‌ಜೆಡಿ ಪ್ರಯತ್ನಿಸಿತ್ತು: ನಿತೀಶ್ ಕುಮಾರ್

Update: 2017-08-22 16:54 GMT

ಪಾಟ್ನಾ, ಆ. 22: ನಾನು ಜುಲೈ 26ರಂದು ಮಹಾಮೈತ್ರಿ ಬಿಟ್ಟು ಹೊರ ಬರುವುದಕ್ಕಿಂತ ಹಿಂದೆ ಜೆಡಿಯು ಶಾಸಕರಿಗೆ ಆಮಿಷ ಒಡ್ಡಲಾಗಿತ್ತು ಹಾಗೂ ಪಕ್ಷ ಒಡೆಯಲು ಪ್ರಯತ್ನಿಸಲಾಗಿತ್ತು ಎಂದು ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಆರೋಪಿಸಿದ್ದಾರೆ.

 ಅವರು ಯಾವುದೇ ಪಕ್ಷ ಅಥವಾ ರಾಜಕಾರಣಿಯ ಹೆಸರು ಉಲ್ಲೇಖಿಸಿಲ್ಲ. ಆದರೆ, ಈ ರಾಜಕೀಯ ಆಟದ ಹಿಂದೆ ಆರ್‌ಜೆಡಿ ನಾಯಕತ್ವ ಕೈಚಳಕ ತೋರಿಸಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಶರದ್ ಯಾದವ್ ಹಾಗೂ ಮುಸ್ಲಿಂ ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡಲಾಗಿದೆ ಎಂದು ಪಕ್ಷದ ಒಳಗಿನವರೇ ತಿಳಿಸಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಜೆಡಿಯು ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿರುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ತಾನು ಎನ್‌ಡಿಎ ಸೇರುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ನಿತೀಶ್ ಕುಮಾರ್ ಆರ್‌ಜೆಡಿಯನ್ನು ಉದ್ದೇಶಿಸಿ ಹೇಳಿದರು.

ಒಬ್ಬನೇ ಒಬ್ಬ ಜೆಡಿಯು ಶಾಸಕ ಅವರ ಆಹ್ವಾನ ಸ್ವೀಕರಿಸಲಿಲ್ಲ. ಒಟ್ಟಾಗಿ 71 ಶಾಸಕರು ನಮ್ಮಾಂದಿಗೆ ಇದ್ದಾರೆ. ಹಾಗೂ ನಾವು ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದೇವೆ. ನಂಬಿ ಇಲ್ಲವೇ ಬಿಡಿ, ಜುಲೈ 26ರಂದು ನಾನು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭ ಬಿಜೆಪಿ ಬೆಂಬಲದ ಆಹ್ವಾನ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.

ಬಿಜೆಪಿಯ ಭ್ರಷ್ಟಾಚಾರದ ಆರೋಪದ ಕುರಿತಂತೆ ಆಗಿನ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡುವುದಿಲ್ಲ, ಸಾರ್ವಜನಿಕರಿಗೆ ಯಾವುದೇ ವಿವರಣೆಯನ್ನೂ ನೀಡುವುದಿಲ್ಲ ಎಂದು ಜುಲೈ 26ರಂದು ಮಧ್ಯಾಹ್ನ ಆರ್‌ಜೆಡಿಯ ಶಾಸಕಾಂಗ ಪಕ್ಷ ನಿರ್ಧರಿಸಿದ ಬಳಿಕ ನಾನು ಈ ನಿರ್ಧಾರ ತೆಗೆದುಕೊಂಡೆ ಎಂದು ಅವರು ಹೇಳಿದ್ದಾರೆ.

 ಮಧ್ಯಾಹ್ನದ ಬಳಿಕ ನಡೆದ ಜೆಡಿಯು ಕಾರ್ಯಕಾರಿಣಿ ಸಭೆಯಲ್ಲಿ ನಾನು ಈ ಎಲ್ಲ ವಿಚಾರಗಳನ್ನು ಪ್ರಸ್ತುತಪಡಿಸಿದೆ. ಭ್ರಷ್ಟಾಚಾರ ಕುರಿತ ಶೂನ್ಯ ಸಹನೆಯ ನನ್ನ ನಿಲುವಿಗೆ ಬದ್ಧನಾಗಿದ್ದುಕೊಂಡು ಸರಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ ಎಂದು ನಿತೀಶ್ ಕುಮಾರ್ ತಿಳಿಸಿದರು.

 ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿ ಹಿಂದಿರುಗುವಾಗ ನರೇಂದ್ರ ಮೋದಿ ಟ್ವೀಟ್ ಮಾಡಿದರು. ಬಿಜೆಪಿ ಬೆಂಬಲದ ಆಹ್ವಾನ ನೀಡಿದರು. ಮತ್ತೊಮ್ಮೆ ನಾನು ಜೆಡಿಯು ಶಾಸಕರೊಂದಿಗೆ ಮಾತುಕತೆ ನಡೆಸಿದೆ ಹಾಗೂ ಅಭಿಪ್ರಾಯ ಕೇಳಿದೆ. ಅವರೆಲ್ಲಾ ಒಪ್ಪಿದ ಬಳಿಕ, ನಾನು ಬಿಜೆಪಿ ನಾಯಕರೊಂದಿಗೆ ರಾಜಭವನಕ್ಕೆ ತೆರಳಿದೆ ಹಾಗೂ ಸರಕಾರ ರಚಿಸುವ ಹಕ್ಕು ಪ್ರತಿಪಾದಿಸಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News