ಪತ್ರಕರ್ತ ರಾಜ್‌ದೇವ್ ರಂಜನ್ ಹತ್ಯೆ ಪ್ರಕರಣ:ಶಹಬುದ್ದೀನ್ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಕೆ

Update: 2017-08-22 17:10 GMT

ಹೊಸದಿಲ್ಲಿ, ಆ. 22: ಪತ್ರಕರ್ತ ರಾಜ್‌ದೇವ್ ರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ನಾಯಕ ಶಹಬುದ್ದೀನ್ ವಿರುದ್ಧ ಸಿಬಿಐ ಮಂಗಳವಾರ ಆರೋಪ ಪಟ್ಟಿ ಸಲ್ಲಿಸಿದೆ.

ಸಿಬಿಐ 2016 ಡಿಸೆಂಬರ್‌ನಲ್ಲಿ ಮುಝಫ್ಫರ್‌ಪುರ ವಿಶೇಷ ನ್ಯಾಯಾಲಯಕ್ಕೆ ಶಹಬುದ್ದೀನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಇಂದು ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವ ಮುನ್ನ ಬಿಹಾರ ಪೊಲೀಸರು 6 ಜನರ ವಿರುದ್ಧ ಆರೋಪ ಪಟ್ಟಿ ದಾಖಲಿಸಿದ್ದರು. ಪ್ರಸ್ತುತ ತಿಹಾರ್ ಜೈಲ್‌ನಲ್ಲಿರುವ ಶಹಬುದ್ದೀನ್ ವಿರುದ್ಧ ಸಿಬಿಐ ಐಪಿಸಿ ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಸಂಚು, ಕೊಲೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಆರೋಪ ದಾಖಲಿಸಿದೆ ಎಂದು ಸಿಬಿಐ ಹೇಳಿಕೆ ತಿಳಿಸಿದೆ.

 ಸಿವಾನ್‌ನಿಂದ 4 ಬಾರಿ ಆರ್‌ಜೆಡಿ ಸಂಸದನಾಗಿ ಆಯ್ಕೆಯಾಗಿದ್ದ ಶಹಬುದ್ದೀನ್ ಕಳೆದ ವರ್ಷ ಸಿವಾನ್‌ನ ಪ್ರಮುಖ ಹಿಂದಿ ದಿನಪತ್ರಿಕೆಯ ಪತ್ರಕರ್ತ ರಂಜನ್ ಅವರನ್ನು ಹತ್ಯೆಗೈದಿದ್ದರು. ಶಹಬುದ್ದೀನ್ 45 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಕ್ಕಳನ್ನು ಕಳೆದುಕೊಂಡ ಸಿವಾನ್ ನಿವಾಸಿ ಚಂದ್ರಕೇಶ್ವರ್ ಪ್ರಸಾದ್ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಶಹಬುದ್ದೀನ್‌ನನ್ನು ಫೆಬ್ರವರಿಯಲ್ಲಿ ತಿಹಾರ್ ಜೈಲಿಗೆ ವರ್ಗಾಯಿಸಲಾಗಿತ್ತು.

ಕಳೆದ ವರ್ಷ ಮೇ 31ರಂದು ಪತ್ರಕರ್ತ ರಂಜನ್ ಅವರನ್ನು ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಈ ಕೊಲೆಯಲ್ಲಿ ಶಹಬುದ್ದೀನ್‌ನ ಕೈವಾಡ ಇದೆ ಎಂದು ರಂಜನ್ ಅವರ ಪತ್ನಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News