ಕರುಡು ಮಾರ್ಗನಕ್ಷೆಯಲ್ಲಿ ಮತ್ತೆ 6 ಕಡೆ ಬದಲಾವಣೆ: 1000 ಕೋಟಿ ರೂ. ವೆಚ್ಚದಲ್ಲಿ 45 ಕಿ.ಮೀ. ಉದ್ದದ ರಸ್ತೆ!

Update: 2017-08-22 18:02 GMT

ಮಂಗಳೂರು, ಆ. 22: ರಾಷ್ಟ್ರೀಯ ಹೆದ್ದಾರಿ ಕಾರ್ಕಳ - ಮಂಗಳೂರು ನಡುವಿನ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ ಮಾರ್ಗ ನಕ್ಷೆಯ ಕರಡು ಸಿದ್ಧಪಡಿಸುವ ಕಾಮಗಾರಿಯಲ್ಲಿ ಮತ್ತೆ ಹಲವು ಬದಲಾವಣೆ ಮಾಡಿ ಒಪ್ಪಿಗೆಗೆ ಮಂಡಿಸಲಾಗಿದೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಳೆಯ ಮಾರ್ಗಸೂಚಿಗೆ ಹೊಸತಾಗಿ ಹತ್ತು ಕೆಳಸೇತುವೆಗಳು, ಒಂದು ಮೇಲ್ಸೇತುವೆ ಹಾಗೂ ಮೂಡಬಿದ್ರೆ ಮತ್ತು ಕೈಕಂಬದಲ್ಲಿ ಎರಡು ಬೃಹತ್ ಮೇಲ್ಸೇತುವೆಗಳನ್ನು ಪ್ರಸ್ತಾವಿಸಿರುವುದರ ಬಗ್ಗೆ ತಯಾರಿಸಲಾದ ಹೊಸ ಮಾರ್ಗನಕ್ಷೆಯ ಕರಡನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್.ಪಿ.ಸೋಮಶೇಖರ್ ಪ್ರದರ್ಶಿಸಿದರು.

ಹಿಂದಿನ ಸಭೆಯಲ್ಲಿ ಸಚಿವರು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪದ ಹಿನ್ನೆಲೆಯಲ್ಲಿ ಕರುಡು ಮಾರ್ಗನಕ್ಷೆಯಲ್ಲಿ ಸಾಣೂರು, ಮೂರತ್ತಂಗಡಿ, ತೋಡಾರು, ಮಿಜಾರು, ಎಡಪದವು, ಕುಡುಪು ಬಳಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಬಲಾವಣೆ ಮಾಡಿರುವುದಾಗಿ ತಿಳಿಸಿದರು.

ಮಂಗಳೂರು ಕಾರ್ಕಳ ನಡುವೆ 45 ಕಿ.ಮೀ. ಉದ್ದದ ಚತುಷ್ಪಥ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಸಾರ್ವಜನಿಕರ ಆಕ್ಷೇಪದ ಕಾರಣದಿಂದ ಮೂರನೇ ಬಾರಿಗೆ ಮಾರ್ಗನಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. ಯಾವುದೇ ಗ್ರಾಮಗಳಲ್ಲಿ ಜನವಸತಿ ಪ್ರದೇಶಕ್ಕೆ ಧಕ್ಕೆಯಾಗದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದು ಬಹುತೇಕ ಅಂತಿಮ ಹಂತದ ಬದಲಾವಣೆ. ಜಿಲ್ಲಾಧಿಕಾರಿಯವರ ಅನುಮೋದನೆ ದೊರಕಿದ ತಕ್ಷಣವೇ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗುವುದು. ಬಳಿಕ ಜಂಟಿ ಸ್ಥಳ ಸಮೀಕ್ಷೆ ನಡೆದು ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಗುರುಪುರ ನದಿಗೆ ಹೊಸ ಸೇತುವೆ!
ಗುರುಪುರ ನದಿಗೆ ವಿಸ್ತಾರವಾದ ಹೊಸ ಸೇತುವೆ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. . ನದಿ ದಾಟಿ ಮೂಡುಬಿದಿರೆ ಕಡೆಗೆ ಹೋಗುವಾಗ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲಿ ಕಡಿದಾದ ಮಾರ್ಗದಲ್ಲಿ ರಸ್ತೆ ಇದೆ. ಇದರಿಂದ ಘನ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ವಿಸ್ತಾರವಾದ ತಿರುವು ಪಡೆದು ಮುಂದಕ್ಕೆ ಸಾಗುವಂತೆ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವಿವರ ನೀಡಿದರು.

ಎರಡು ಬೈಪಾಸ್

ಕೈಕಂಬ ಮತ್ತು ಮೂಡುಬಿದಿರೆ ಪಟ್ಟಣ ಪ್ರದೇಶಗಳಲ್ಲಿ ಎರಡು ಬೈಪಾಸ್ ನಿರ್ಮಿಸಲಾಗುತ್ತದೆ. ಎರಡೂ ಕಡೆಗಳಲ್ಲಿ ಪಟ್ಟಣ ಪ್ರದೇಶದಲ್ಲಿ ಬೃಹತ್ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. 10 ಸ್ಥಳಗಳಲ್ಲಿ ಬೃಹತ್ ವಾಹನಗಳು ಸಂಚರಿಸಬಹುದಾದ ಕೆಳ ಸೇತುವೆಗಳು ಮತ್ತು ಎಂಟು ಸ್ಥಳಗಳಲ್ಲಿ ಲಘು ವಾಹನಗಳು ಸಂಚರಿಸಬಹುದಾದ ಕೆಳಸೇತುವೆಗಳನ್ನು ನಿರ್ಮಿಸುವ ಪ್ರಸ್ತಾಪವಿದೆ. ಗುರುಪುರ ಬಳಿ ಬೃಹತ್ ವಾಹನಗಳು ಸಂಚರಿಸಬಹುದಾದ ಮೇಲ್ಸೇತುವೆ ನಿರ್ಮಾಣವನ್ನೂ ಪ್ರಸ್ತಾಪಿಸಲಾಗಿದೆ.

2009ರಲ್ಲಿ ಈ ರಾಷ್ಟ್ರೀಯ ಹೆದ್ದಾರಿಯ ಹಳೆ ರಸ್ತೆ ಅಗಲೀಕರಣಕ್ಕೆ ವಿಸ್ತೃತ ಯೋಜನೆ ಆರಂಭಗೊಂಡಿತ್ತು. ಇದೀಗ ಆ ಯೋಜನೆಯ ಬದಲಿಗೆ ಹೊಸ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಈಗ ಇರುವ ಮಂಗಳೂರು ಕಾರ್ಕಳ ಹೆದ್ದಾರಿಯಲ್ಲೇ ಹೊಸ ಮಾರ್ಗವೂ ಹಾದುಹೋಗುವುದು ಕಷ್ಟ. ಮುಂದಿನ 30ರಿಂದ 40 ವರ್ಷಗಳ ಅಗತ್ಯವನ್ನು ಗಮನದಲ್ಲಿ ಇರಿಸಿಕೊಂಡು ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗುತ್ತಿದೆ. ಹಳೆಯ ಮಾರ್ಗದಲ್ಲಿ ಹೆಚ್ಚಿನ ಕಡೆ 45 ಮೀಟರ್ ಅಗಲದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ಆಕ್ಷೇಪಗಳಿೆ ಸೋಮಶೇಖರ್ ಪ್ರತಿಕ್ರಿಯಿಸಿದರು.

ವಾಹನ ಗಣತಿ ವರದಿ ಪ್ರಕಾರ, ಮಂಗಳೂರು ಕಾರ್ಕಳ ಮಾರ್ಗದಲ್ಲಿ ಪ್ರತಿ ಗಂಟೆಗೆ 13,000ದಿಂದ 14,000 ವಾಹನಗಳು ಸಂಚರಿಸುತ್ತಿವೆ. 45 ಕಿ.ಮೀ. ಉದ್ದದ ಮಾರ್ಗವನ್ನು ಒಂದು ಗಂಟೆ ಅವಧಿಯಲ್ಲಿ ಕ್ರಮಿಸುವುದಕ್ಕೆ ಸಾಧ್ಯವಾಗುವಂತೆ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಕರಡು ಮಾರ್ಗ ನಕ್ಷೆಗೆ ಒಪ್ಪಿಗೆ ದೊರೆತ ಬಳಿಕ ಕಂದಾಯ ಇಲಾಖೆ ಮತ್ತು ಎನ್‌ಎಚ್‌ಎಐ ವತಿಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು. ಆ ಸಂದರ್ಭದಲ್ಲಿ ಅನಿವಾರ್ಯ ಕಂಡುಬಂದಲ್ಲಿ ಕೆಲವು ಬದಲಾವಣೆಗಳಿಗೆ ಅವಕಾಶವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಸದಸ್ಯರು ಸೇರಿದಂತೆ ಹಲವು ಮಂದಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಉದ್ದೇಶಿತ ಮಾರ್ಗದಲ್ಲಿ ಸ್ಥಿರಾಸ್ತಿ ಹೊಂದಿರುವವರು ಸಭೆಯಲ್ಲಿ ಹಾಜರಿದ್ದರು. ಹೊಸ ಕರಡು ನಕ್ಷೆಯಲ್ಲೂ ಕೆಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಮಾಡುವಂತೆ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

ಶಾಸಕ ಜೆ.ಆರ್.ಲೋಬೊ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್.ರವಿ ಸಭೆಯಲ್ಲಿದ್ದರು.

ಲಿಖಿತ ಆಕ್ಷೇಪ ಸಲ್ಲಿಸಲು ಅವಕಾಶವಿದೆ: ಸಚಿವ ರೈ

ಹಿಂದೆ ಸಿದ್ಧಪಡಿಸಿದ್ದ ಕರಡು ಮಾರ್ಗ ನಕ್ಷೆಗಳಿಗೆ ಕಳೆದ ಸಭೆಯಲ್ಲಿ ಸಾರ್ವಜನಿಕರಿಂದ ಹಲವು ರೀತಿಯ ಆಕ್ಷೇಪ ವ್ಯಕ್ತವಾಗಿತ್ತು. ಈ ಕಾರಣದಿಂದ ಹೊಸ ಕರಡು ನಕ್ಷೆ ಸಿದ್ಧಪಡಿಸಲು ಸೂಚಿಸಲಾಗಿತ್ತು. ಅದನ್ನು ಯೋಜನಾ ನಿರ್ದೇಶಕರು ಸಭೆಯ ಮುಂದಿಟ್ಟಿದ್ದಾರೆ. ಈ ನಕ್ಷೆಯಲ್ಲೂ ಆಕ್ಷೇಪಗಳಿದ್ದಲ್ಲಿ ಸಾರ್ವಜನಿಕರು ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಲಿಖಿತವಾಗಿ ಸಲ್ಲಿಸಬಹುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

1 ಕಿ.ಮೀ. ರಸ್ತೆಗೆ 20 ಕೋಟಿ ರೂ. ಖರ್ಚು!
ಕಾರ್ಕಳ- ಮಂಗಳೂರು ನಡುವಿನ 45 ಕಿ.ಮೀ. ಉದ್ದದ ಚತುಷ್ಪಥ ಹೆದ್ದಾರಿಯಲ್ಲಿ ಕೆಳಸೇತುವೆಗಳು, ಮೇಲ್ಸೇತುವೆಗಳು ಹಾಗೂ ಇತರೆ ಕಾಮಗಾರಿಗಳಿಗೆ ಸೇರಿ 1,000 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಪ್ರತಿ ಕಿಲೋಮೀಟರ್ ರಸ್ತೆಗೆ ನಿರ್ಮಾಣಕ್ಕೆ 20 ಕೋಟಿ ರೂ. ವೆಚ್ಚವಾಗಲಿದೆ. ಆರು ತಿಂಗಳೊಳಗೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸೋಮಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News