×
Ad

ಸಲಿಂಗಕಾಮಿ ಗೆಳೆಯನನ್ನು ಮದುವೆಯಾಗಿರುವ ವ್ಯಕ್ತಿಯ ಪತ್ನಿಯಿಂದ ಪೊಲೀಸರಿಗೆ ದೂರು

Update: 2017-08-23 16:35 IST

ಮುಂಬೈ,ಆ.23: ತನ್ನ ಪತಿ ಈಗಾಗಲೇ ಪುರುಷನೋರ್ವನನ್ನು ಮದುವೆಯಾಗಿ ತನ್ನನ್ನು ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವಳು ಥಾಣೆ ಜಿಲ್ಲೆಯ ಕಲ್ಯಾಣ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ತನ್ನ ದೂರಿಗೆ ಸಮರ್ಥನೆಯಾಗಿ ತನ್ನ ಗಂಡ ಗೆಳೆಯನನ್ನು ಮದುವೆಯಾಗುತ್ತಿರುವ ಚಿತ್ರ ಸೇರಿದಂತೆ ದಾಖಲೆಗಳನ್ನು ಆಕೆ ಪೊಲೀಸರಿಗೆ ನೀಡಿದ್ದಾಳೆ.

ಮಹಿಳೆಯ ಪತಿ ಮಿಲಿಂದ್ ಸಾಳ್ವೆ ಮತ್ತು ಆತನ ಸಲಿಂಗಕಾಮಿ ಗೆಳೆಯ ವೈಭವ್ 2015, ಫೆಬ್ರವರಿಯಲ್ಲಿ ನಡೆದಿದ್ದ ‘ಗೇ ಪ್ರೈಡ್ ಮಾರ್ಚ್’ನಲ್ಲಿ ಪರಸ್ಪರ ಮದುವೆಯಾಗಿದ್ದು, ಈ ವರದಿಯು ಚಿತ್ರ ಸಹಿತ ಮುಂಬೈನ ಆಂಗ್ಲಪತ್ರಿಕೆಯೊಂದರ 2015,ಫೆಬ್ರವರಿ 1ರ ಸಂಚಿಕೆಯಲ್ಲಿ ಪ್ರಕಟಗೊಂಡಿತ್ತು. ಮಹಿಳೆ ಅದರ ಪ್ರತಿಯನ್ನೂ ಪೊಲೀಸರಿಗೊಪ್ಪಿಸಿದ್ದಾಳೆ.

30ರ ಹರೆಯದ ಈ ಮಹಿಳೆ ಕಲ್ಯಾಣದ ಬಿರ್ಲಾ ಕಾಲೇಜ್ ಸಮೀಪದ ಕಾಲನಿಯೊಂದರ ನಿವಾಸಿಯಾಗಿದ್ದಾಳೆ.

 ಸಾಳ್ವೆ, ಆತನ ತಾಯಿ ಸುನೀತಾ ಮತ್ತು ತಂದೆ ನರಸಿಂಗ ಸಾಳ್ವೆ ಅವರ ವಿರುದ್ಧ ಪೊಲೀಸರು ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಮತ್ತು ಕೌಟುಂಬಿಕ ಹಿಂಸೆ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪ್ರಕಾಶನ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಮಿಲಿಂದ್‌ನನ್ನು ಮಹಿಳೆ 2015, ನವಂಬರ್‌ನಲ್ಲಿ ವಿವಾಹವಾಗಿದ್ದಳು. ಆದರೆ ತನ್ನ ಗಂಡ ಮೊದಲೇ ಪುರುಷನನ್ನು ಮದುವೆ ಯಾಗಿದ್ದಾನೆ ಎನ್ನುವುದು ಆಕೆಗೆ ನಂತರ ಗೊತ್ತಾಗಿತ್ತು. ಈ ಬಗ್ಗೆ ಮಿಲಿಂದ್‌ನನ್ನು ಪ್ರಶ್ನಿಸಿದಾಗ ಆತ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ.

ತನ್ನ ಅತ್ತೆ-ಮಾವನಿಗೂ ವಿಷಯ ಗೊತ್ತಿತ್ತು, ಆದರೂ ಅದನ್ನು ತನ್ನಿಂದ ಮುಚ್ಚಿಟ್ಟಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ದಂಪತಿಗೆ ಎಂಟು ತಿಂಗಳ ಮಗಳಿದ್ದು, ಮಹಿಳೆ ಈಗ ಗಂಡನ ಮನೆಯನ್ನು ತೊರೆದು ತವರಿನಲ್ಲಿ ವಾಸವಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News