×
Ad

ಮ್ಯಾನ್ಮಾರ್: ರೊಹಿಂಗ್ಯ ಮುಸ್ಲಿಮರಿಗೆ ಗ್ರಾಮದಿಂದ ಹೊರಬರದಂತೆ ತಡೆ?

Update: 2017-08-23 20:40 IST

ಯಾಂಗನ್, ಆ. 23: ಪಶ್ಚಿಮ ಮ್ಯಾನ್ಮಾರ್‌ನ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ನೂರಾರು ರೊಹಿಂಗ್ಯ ಮುಸ್ಲಿಮರು ತಮ್ಮ ಸ್ಥಳದಿಂದ ಹೊರಬರದಂತೆ ಅವರ ಬೌದ್ಧ ನೆರೆಕರೆಯವರು ತಡೆ ನಿರ್ಮಿಸಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಈ ಮೂಲಕ ಹಿಂಸೆಯು ಸಂಘರ್ಷಭರಿತ ರಖೈನ್ ರಾಜ್ಯದಿಂದ, ಬೌದ್ಧರು ಮತ್ತು ರೊಹಿಂಗ್ಯ ಮುಸ್ಲಿಮರು ಜೊತೆಯಾಗಿ ವಾಸಿಸುತ್ತಿರುವ ಇತರ ಸ್ಥಳಗಳಿಗೂ ಹರಡುವ ಸೂಚನೆಗಳು ಹೊರಬಿದ್ದಿವೆ.

ಝೇ ಡಿ ಪಯಿನ್ ಗ್ರಾಮದಲ್ಲಿ ವಾಸಿಸುತ್ತಿರುವ ಮುಸ್ಲಿಮರನ್ನು ಕೆಲಸಕ್ಕೆ ಹೋಗದಂತೆ ಅಥವಾ ಆಹಾರ ಮತ್ತು ನೀರು ತರದಂತೆ ಕಳೆದ ಮೂರು ವಾರಗಳಿಂದ ತಡೆಯಲಾಗಿದೆ ಎಂದು ನಿವಾಸಿಗಳು, ನೆರವು ಕಾರ್ಯಕರ್ತರು ಮತ್ತು ವೀಕ್ಷಕರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆದಾಗ್ಯೂ, ಅಗತ್ಯ ವಸ್ತುಗಳನು ತರಲು ಕೆಲವರಿಗೆ ಮಂಗಳವಾರ ಅವಕಾಶ ನೀಡಲಾಗಿದೆ.

ರೊಹಿಂಗ್ಯ ಮುಸ್ಲಿಮರು ಖರೀದಿಸುವ ಆಹಾರದ ಪ್ರಮಾಣವನ್ನು ರಖೈನ್‌ನ ಬೌದ್ಧ ಗ್ರಾಮಸ್ಥರು ನಿಯಂತ್ರಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಆದರೆ, ಗ್ರಾಮದಲ್ಲಿ ಅವರ ಓಡಾಟವನ್ನು ನಿರ್ಬಂಧಿಸಲಾಗಿದೆ ಹಾಗೂ ಕೆಲಸಕ್ಕೆ ಹೋಗದಂತೆ ತಡೆಯಲಾಗಿದೆ ಎಂಬುದನ್ನು ಅವರು ನಿರಾಕರಿಸಿದ್ದಾರೆ.

‘‘ಅವರು ಹೆದರಿಕೆಯಿಂದ ಹೊರಗೆ ಹೋಗಿರದೆ ಇರಬಹುದು ಎಂದು ನನಗನಿಸುತ್ತದೆ’’ ಎಂದು ಮ್ಯಾನ್ಮಾರ್ ಪೊಲೀಸ್ ಪ್ರಧಾನಕಚೇರಿಯ ವಕ್ತಾರ ಕರ್ನಲ್ ಮಯೊ ತು ಸೋ ಹೇಳಿದರು.

ಈ ಪ್ರದೇಶದಲ್ಲಿ ಭದ್ರತೆಯನ್ನು ಸುಧಾರಿಸಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರಕಾರ ಹೇಳಿದೆ.

2012ರಲ್ಲಿ ರಖೈನ್ ರಾಜ್ಯದ ರಾಜಧಾನಿ ಸಿಟ್ವೆಯಲ್ಲಿ ನಡೆದ ಕೋಮು ಹಿಂಸಾಚಾರ ಪುನರಾವರ್ತಿಸಬಹುದು ಎಂಬ ಭೀತಿಯನ್ನು ಈ ಬಿಕ್ಕಟ್ಟು ಹುಟ್ಟುಹಾಕಿದೆ. ಅಂದಿನ ಹಿಂಸಾಚಾರದಲ್ಲಿ ಸುಮಾರು 200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 1.4 ಲಕ್ಷ ಜನರು ನಿರ್ವಸಿತರಾಗಿದ್ದಾರೆ. ಅವರ ಪೈಕಿ ಹೆಚ್ಚಿನವರು ರೊಹಿಂಗ್ಯರು.

ಸಂಘರ್ಷಕ್ಕೆ ಕಾರಣವಾಗಬಹುದು ಎನ್ನುವ ಭೀತಿ

‘‘ಝೇ ಡಿ ಪಯಿನ್ ಗ್ರಾಮದಲ್ಲಿ ನೆಲೆಸಿರುವ ಪರಿಸ್ಥಿತಿಯು ಎರಡು ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಭೀತಿಯನ್ನು ನಾವು ಹೊಂದಿದ್ದೇವೆ’’ ಎಂದು ರೊಹಿಂಗ್ಯ ಉಸ್ತುವಾರಿ ಸಂಘಟನೆ ‘ಅರಕನ್ ಪ್ರಾಜೆಕ್ಟ್’ನ ಕ್ರಿಸ್ ಲೆವ ಹೇಳುತ್ತಾರೆ.

ರಖೈನ್ ರಾಜ್ಯದಲ್ಲಿ ಸುಮಾರು 11 ಲಕ್ಷ ರೊಹಿಂಗ್ಯ ಮುಸ್ಲಿಮರು ವಾಸಿಸುತ್ತಿದ್ದಾರೆ. ಆದರೆ, ಅವರಿಗೆ ಮ್ಯಾನ್ಮಾರ್ ಪೌರತ್ವ ನೀಡಲಾಗಿಲ್ಲ ಹಾಗೂ ಅವರು ತೀವ್ರ ಪ್ರಯಾಣ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News