ಗೋರಖ್‌ಪುರ ದುರಂತ: ವರದಿ ಸಲ್ಲಿಸಿದ ತನಿಖಾ ಸಂಸ್ಥೆ, ಎಫ್‌ಐಆರ್ ದಾಖಲಿಸಲು ಗೊಂದಲ
ಲಕ್ನೊ, ಆ. 1: ಯಾವ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಬಗ್ಗೆ ಈಗಲೂ ಗೊಂದಲ ಮುಂದು ವರಿದಿರುವುದರಿಂದ ಗೋರಖ್‌ಪುರದಲ್ಲಿ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಯೋಗಿ ಆದಿತ್ಯನಾಥ್ ಅವರ ಸರಕಾರ ಆದೇಶಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.
ಮಂಗಳವಾರ ಹಝ್ರತ್‌ಗಂಜ್ ಪೊಲೀಸ್ ಠಾಣೆ ಈ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಆರು ಜನರ ವಿರುದ್ಧ ಪ್ರಕರಣ ದಾಖಲಿಸಲು ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಅವರ ಕಚೇರಿಯ ಸಿಬ್ಬಂದಿ ಪೊಲೀಸ್ ಠಾಣೆ ತಲುಪಿದ್ದರು. ಆದರೆ, ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂಬ ಬಗ್ಗೆ ಪೊಲೀಸರು ಗೊಂದಲಕ್ಕೆ ಒಳಗಾದರು.
ಈ ಹಿನ್ನೆಲೆಯಲ್ಲಿ ಇದುವರೆಗೆ ಪ್ರಥಮ ಮಾಹಿತಿ ವರದಿ ದಾಖಲಿಸಿಲ್ಲ.ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ನೇತೃತ್ವದ ನಾಲ್ಕು ಸದಸ್ಯರ ಸಮಿತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಂಗಳವಾರ ವರದಿ ಸಲ್ಲಿಸಿದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿತ್ತು.