ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಘಟನೆ: ಜಿಆರ್‌ಪಿಯಿಂದ ತನಿಖೆ ಆರಂಭ
ಮುಝಫ್ಫರ್‌ನಗರ, ಆ. 23: ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ ಹಳಿತಪ್ಪಿರುವ ಘಟನೆಗೆ ಸಂಬಂಧಿಸಿ ಸರಕಾರದ ರೈಲ್ವೆ ಪೊಲೀಸರು (ಜಿಆರ್‌ಪಿ)ತನಿಖೆ ಆರಂಭಿಸಿದ್ದಾರೆ. ದುರಂತ ಸಂಭವಿಸಿದ ಖಟೌಲಿಗೆ ಜಿಆರ್‌ಪಿ ಸಿಬ್ಬಂದಿ ಭೇಟಿ ನೀಡಿ ಸ್ಥಳೀಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜಿಆರ್‌ಪಿಯ ತನಿಖಾಧಿಕಾರಿ, ಪೊಲೀಸ್ ಉಪ ಅಧೀಕ್ಷಕ ರಣಧೀರ್ ಸಿಂಗ್ ಆಗಸ್ಟ್ 19ರಂದು ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಮಂಗಳವಾರ ಅಂಗಡಿ ಮಾಲಕರು, ಮನೆ ಮಾಲಕರು ಹಾಗೂ ಇತರರನ್ನು ಭೇಟಿಯಾಗಿದ್ದಾರೆ.
ಶೀಘ್ರದಲ್ಲಿ ನಾವು ಪ್ರಕರಣದ ತನಿಖೆ ಪೂರ್ಣಗೊಳಿಸಲಿದ್ದು, ರೈಲು ಹಳಿತಪ್ಪಲು ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಖಟೌಲಿಯಲ್ಲಿ ಶನಿವಾರ ರೈಲಿನ 12 ಬೋಗಿಗಳು ಹಳಿತಪ್ಪಿ ಸಂಭವಿಸಿದ ದುರಂತದಲ್ಲಿ 22 ಮಂದಿ ಸಾವನ್ನಪ್ಪಿ, 156 ಮಂದಿ ಗಾಯಗೊಂಡಿದ್ದರು. ಉತ್ಕಲ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ಸಂಬಂಧಿಸಿ ಆತುರದ ಹಾಗೂ ನಿರ್ಲಕ್ಷದಿಂದ ಸಾವಿಗೆ ಕಾರಣವಾದ ಬಗ್ಗೆ ಜಿಆರ್‌ಪಿ ಐಪಿಸಿ ಹಾಗೂ ರೈಲ್ವೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದೆ.
ರೈಲು ಹಳಿತಪ್ಪುವ ಸಂದರ್ಭ ಕರ್ತವ್ಯದಲ್ಲಿದ್ದ ಖಟೌಲಿ ರೈಲ್ವೆ ಸ್ಟೇಷನ್‌ನ ಠಾಣಾ ಅಧೀಕ್ಷಕ ಪ್ರಕಾಶ್ ಸಿಂಗ್ ಹಾಗೂ 12 ರೈಲ್ವೆ ಗ್ಯಾಂಗ್‌ಮನ್‌ಗಳಿಗೆ ರೈಲು ಸುರಕ್ಷಾ ಆಯುಕ್ತರು ನೋಟಿಸು ಕಳುಹಿಸಿದ್ದರು.
ಸಿಆರ್‌ಎಸ್ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದ ಹೇಳಿಕೆಗಳನ್ನು ದಾಖಲಿಸಲು ದಿಲ್ಲಿಯಿಂದ ನಮಗೆ ಕರೆ ಬಂದಿದೆ ಎಂದು ರೈಲ್ವೆ ನಿಲ್ದಾಣದ ಅಧೀಕ್ಷಕರು ತಿಳಿಸಿದ್ದಾರೆ.