ದತ್ತಾಂಶ ಮಾಹಿತಿ ಕಳವು ಆರೋಪ: ಚೀನಾ ಸಂಸ್ಥೆಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿದ ಸರಕಾರ
ಹೊಸದಿಲ್ಲಿ, ಆ.24: ದತ್ತಾಂಶ ಮಾಹಿತಿಗೆ ಕನ್ನ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚೀನಾದ ತಂತ್ರಜ್ಞಾನ ಸಂಸ್ಥೆಗಳ ವಿರುದ್ಧದ ಕಾರ್ಯಾಚರಣೆಯನ್ನು ಭಾರತ ತೀವ್ರಗೊಳಿಸಿದ್ದು, ಚೀನಾದ ಯು.ಸಿ.ಬ್ರೌಸರ್‌ಗಳನ್ನು ಈಗ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಚೀನಾದ ‘ಆಲಿಬಾಬ ಗ್ರೂಪ್ ಹೋಲ್ಡಿಂಗ್’ ಸಂಸ್ಥೆಯ ಯುಸಿ ವೆಬ್ ಬ್ರೌಸರ್‌ಗಳ ತಪಾಸಣಾ ಕಾರ್ಯ ಪ್ರಗತಿಯಲ್ಲಿದ್ದು , ಕ್ರಮ ಕೈಗೊಳ್ಳುವ ಅಗತ್ಯದ ಕುರಿತು ವರದಿ ಕೈಸೇರಿದ ಬಳಿಕ ನಿರ್ಧರಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್‌ಪ್ರಕಾಶ್ ಸಾಹ್ನಿ ತಿಳಿಸಿದ್ದಾರೆ. ಭಾರತದ 100 ಮಿಲಿಯನ್‌ಗೂ ಹೆಚ್ಚಿನ ಜನರು ಪ್ರತೀ ತಿಂಗಳು ಯುಸಿ ಬ್ರೌಸರ್ ಅನ್ನು ಸಕ್ರಿಯವಾಗಿ ಬಳಕೆ ಮಾಡುತ್ತಿದ್ದು ಭಾರತದ ಮೊಬೈಲ್ ಬ್ರೌಸರ್ ಮಾರುಕಟ್ಟೆಯಲ್ಲಿ ಶೇ.50ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಎನ್ನಲಾಗಿದೆ.
ಭಾರತದ ಸೈಬರ್ ಕ್ಷೇತ್ರವನ್ನು ಹಾಗೂ ಅದರಲ್ಲಿ ಒಳಗೊಂಡಿರುವ ಡಿಜಿಟಲ್ ದತ್ತಾಂಶ ಮಾಹಿತಿಯನ್ನು ಸುರಕ್ಷಿತಗೊಳಿಸುವುದು ತನ್ನ ಆದ್ಯತೆಯಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇತ್ತೀಚೆಗೆ ಹೇಳಿಕೆ ನೀಡಿತ್ತು. ಅಲ್ಲದೆ , ತಮ್ಮ ಸ್ಮಾರ್ಟ್‌ಫೋನ್ ಉತ್ಪನ್ನಗಳಲ್ಲಿ ಅಳವಡಿಸಲಾಗಿರುವ ಸುರಕ್ಷೆ ಮತ್ತು ಭದ್ರತಾ ವ್ಯವಸ್ಥೆ, ಸಂರಚನಾ ಕ್ರಮ, ಸಂಸ್ಥೆಯ ನಿಯಮಗಳ ಚೌಕಟ್ಟು, ಮಾರ್ಗದರ್ಶಿ ಸೂತ್ರ ಹಾಗೂ ಗುಣಮಟ್ಟ- ಈ ಕುರಿತು ವಿವರವಾದ ಲಿಖಿತ ಮಾಹಿತಿಯನ್ನು ಸಲ್ಲಿಸುವಂತೆ ಐಟಿ ಸಚಿವಾಲಯ ಸೋಮವಾರ 24ಕ್ಕೂ ಅಧಿಕ ಸ್ಮಾರ್ಟ್‌ಫೋನ್ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಚೀನಾದ ಪ್ರಮುಖ ಮೊಬೈಲ್ ಬ್ರಾಂಡ್‌ಗಳಾದ ಕ್ಸಿಯೋಮಿ, ಲೆನೊವೊ, ಒಪ್ಪೊ, ವಿವೊ, ಜಿಯೊನಿ ಇತ್ಯಾದಿಗಳನ್ನು ಉತ್ಪಾದಿಸುವ ಸಂಸ್ಥೆಗಳು, ಆ್ಯಪಲ್, ಸ್ಯಾಮ್‌ಸಂಗ್ ಮುಂತಾದ ಜಾಗತಿಕ ಬ್ರಾಂಡೆಡ್ ಮೊಬೈಲ್ ತಯಾರಿಕಾ ಸಂಸ್ಥೆಗಳು ಇದರಲ್ಲಿ ಸೇರಿವೆ.
ಚೀನಾದ ಫೋನ್ ಉತ್ಪಾದನಾ ಸಂಸ್ಥೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ಆದೇಶ ನೀಡಿಲ್ಲ. ಭಾರತೀಯ ಮಾರುಕಟ್ಟೆಯ ಶೇ.75ರಷ್ಟು ಭಾಗವನ್ನು ಈಗಾಗಲೇ ಮೊಬೈಲ್ ಸಂಸ್ಥೆಗಳು ಆವರಿಸಿಕೊಂಡಿರುವ ಕಾರಣ , ವ್ಯವಸ್ಥೆಯ ಸುರಕ್ಷೆ ಹಾಗೂ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಸರಕಾರ ತಿಳಿಸಿದೆ.
ಸರಕಾರದ ನಿರ್ದೇಶನದ ಬಗ್ಗೆ ಪ್ರತಿಕ್ರಿಯೆ ತಿಳಿಸುವಂತೆ ಕೋರಲಾದ ಇ-ಮೇಲ್ ಸಂದೇಶಕ್ಕೆ ಸ್ಯಾಮ್‌ಸಂಗ್, ಆ್ಯಪಲ್, ಮೈಕ್ರೊಮ್ಯಾಕ್ಸ್, ಒಪ್ಪೊ, ಹಾಗೂ ವಿವೊ ಸಂಸ್ಥೆಗಳು ಪ್ರತಿಕ್ರಿಯೆ ನೀಡಿಲ್ಲ. ಕ್ಸಿಯೊಮಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಕ್ಸಿಯೋಮಿ, ವಿವೊ, ಒಪ್ಪೊ ಮತ್ತಿತರ ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆಯನ್ನು ನಿರಂತರವಾಗಿ ವಿಸ್ತರಿಸಿಕೊಂಡಿದ್ದು, ಕಳೆದ ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಭಾರತಕ್ಕೆ ಆಮದಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಚೀನಾದ ಉತ್ಪನ್ನಗಳು ಶೇ.50ಕ್ಕೂ ಹೆಚ್ಚಿನ ಪಾಲನ್ನು ಹೊಂದಿವೆ ಎಂದು ಸಮೀಕ್ಷಾ ವರದಿಯೊಂದರಲ್ಲಿ ತಿಳಿಸಲಾಗಿದೆ. ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಯಾಮ್‌ಸಂಗ್‌ಗೆ ತೀವ್ರ ಪೈಪೋಟಿ ಒಡ್ಡಿರುವ ಕ್ಸಿಯೋಮಿ ಬ್ರಾಂಡ್‌ನ ಫೋನ್‌ಗಳ ಮಾರಾಟ ಪ್ರಕ್ರಿಯೆಗೆ ಪೂರಕವಾಗಿ ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ 100 ಮಾರಾಟ ಮಳಿಗೆಗಳನ್ನು ತೆರೆಯಲು ಸಂಸ್ಥೆ ಯೋಚಿಸುತ್ತಿದೆ.
ಆದರೆ ಸರಕಾರದ ಏಕಾಏಕಿ ಸೂಚನೆ ಮೊಬೈಲ್ ಸಂಸ್ಥೆಗಳನ್ನು ತಬ್ಬಿಬ್ಬುಗೊಳಿಸಿದೆ.ಈ ಕಣ್ಣಾಮುಚ್ಚಾಲೆಯಾಟ ಯಾಕೆ. ಭಾರತದ ದತ್ತಾಂಶ ಮಾಹಿತಿ ಸೋರಿಕೆಯಾಗಬಾರದು ಎಂದು ಸರಕಾರ ಇಚ್ಚಿಸಿದರೆ ಹಾಗೆಂದು ಸ್ಪಷ್ಟವಾಗಿ ಹೇಳಬಹುದಲ್ಲವೇ ಎಂದು ‘ಇಂಡಿಯನ್ ಸೆಲ್ಯುಲರ್ ಅಸೋಸಿಯೇಷನ್’ನ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಪ್ರಶ್ನಿಸಿದ್ದಾರೆ.
ಸರಕಾರವು ದೇಶದಲ್ಲಿರುವ ದತ್ತಾಂಶ ಪೋಷಕ ಸರ್ವರ್‌ಗಳನ್ನು ಗುರುತಿಸುವ, ಆ್ಯಪ್ ಕುರಿತ ರಾಷ್ಟ್ರೀಯ ಸುರಕ್ಷಾ ಚೌಕಟ್ಟು ರೂಪಿಸುವ ಹಾಗೂ ಸುರಕ್ಷಿತ ಸ್ಮಾರ್ಟ್‌ಫೋನ್‌ಗಳ ಕುರಿತು ಒಂದು ಮಾನದಂಡ ರೂಪಿಸುವ ಪ್ರಕ್ರಿಯೆ ನಡೆಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಚೀನಾ ಬ್ರಾಂಡ್ ಉತ್ಪನ್ನಗಳ ಪಾಲು ಅಧಿಕಗೊಳ್ಳುತ್ತಿರುವುದೊಂದೇ ಸರಕಾರದ ಕಳವಳಕ್ಕೆ ಕಾರಣವಾಗಿಲ್ಲ. ದೇಶಕ್ಕೆ ಆಮದಾಗುತ್ತಿರುವ ಮೊಬೈಲ್ ಫೋನ್‌ಗಳ ಬಿಡಿಭಾಗಗಳಲ್ಲಿ ಶೇ.95ರಷ್ಟು ಚೀನಾದಿಂದ ಆಮದಾಗುತ್ತಿವೆ. ಇವೆಲ್ಲ ಬಹುತೇಕ ತೈವಾನ್ ಅಥವಾ ಚೀನಾದಲ್ಲಿ ಚೀನಾ ಸಂಸ್ಥೆಗಳು ಉತ್ಪಾದಿಸಿರುವ ಬಿಡಿಭಾಗಗಳು. ಕೇವಲ ಚಾರ್ಜರ್, ಬ್ಯಾಟರಿಗಳು ಅಥವಾ ಹೆಡ್‌ಸೆಟ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿವೆ ಎಂದು ಕಾರ್ಬನ್ ಮೊಬೈಲ್ ಸಂಸ್ಥೆಯ ಅಧ್ಯಕ್ಷ ಸುಧೀರ್ ಹಸ್ಜ ಹೇಳುತ್ತಾರೆ.
ಯೂಸರ್‌ನಲ್ಲಿ ಚಿಪ್‌ಸೆಟ್‌ಗಳನ್ನು ಅಳವಡಿಸಿ ಚೀನಾ ದತ್ತಾಂಶ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಭಾರತವೂ ಸೇರಿದಂತೆ ಇಡೀ ವಿಶ್ವವೇ ಕಳವಳಗೊಂಡಿದೆ ಎಂದು ಅವರು ಹೇಳಿದರು.
2020ರ ವೇಳೆಗೆ ಭಾರತ ಆಮದು ಮಾಡಿಕೊಳ್ಳುತ್ತಿರುವ ಇಲೆಕ್ಟ್ರಾನಿಕ್ಸ್ ಉಪಕರಣ ಗಳ ಮೌಲ್ಯ ಸುಮಾರು 300 ಬಿಲಿಯನ್ ಡಾಲರ್ (19,22,538 ಕೋಟಿ ರೂ.)ಗೆ ಹೆಚ್ಚಬಹುದು . ಇದೇ ಸಂದರ್ಭ ಇಲೆಕ್ಟ್ರಾನಿಕ್ಸ್ ವಸ್ತುಗಳ ಬೇಡಿಕೆ 400 ಬಿಲಿಯನ್ ಡಾಲರ್‌ಗೆ ಹೆಚ್ಚಬಹುದು ಎಂದು ‘ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್’ನ ವರದಿಯಲ್ಲಿ ತಿಳಿಸಲಾಗಿದೆ.