×
Ad

ದಕ್ಷಿಣ ಚೀನಾ ವಲಯಕ್ಕೆ ಅಪ್ಪಳಿಸಿದ ಪ್ರಬಲ ‘ಹಟೊ’ ಚಂಡಮಾರುತ

Update: 2017-08-24 20:08 IST

ಹಾಂಕಾಂಗ್, ಆ. 24: ಮಕಾವು ಮತ್ತು ದಕ್ಷಿಣ ಚೀನಾ ವಲಯದಲ್ಲಿ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತಕ್ಕೆ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ ಹಾಗೂ 153 ಮಂದಿ ಗಾಯಗೊಂಡಿದ್ದಾರೆ.

ಇದು ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ಈ ವಲಯಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುತವಾಗಿದೆ.

ಮಕಾವುನಲ್ಲಿ ಜಲಪ್ರಳಯ ಉಂಟಾಗಿದ್ದು, ರಸ್ತೆಗಳು ಸಂಪೂರ್ಣ ಜಲವಾವೃತವಾಗಿವೆ ಹಾಗೂ ನಿವಾಸಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ಮಕಾವುನಲ್ಲಿ 8 ಮಂದಿ ಪ್ರಾಕೃತಿಕ ವಿಕೋಪಕ್ಕೆ ಬಲಿಯಾದರೆ, ಪಕ್ಕದ ರಾಜ್ಯ ಗ್ವಾಂಗ್‌ಡಾಂಗ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ.

  ಗಂಟೆಗೆ 160 ಕಿ.ಮೀ.ಗೂ ಅಧಿಕ ವೇಗದ ಗಾಳಿಯೊಂದಿಗೆ ‘ಹಟೊ’ ಚಂಡಮಾರುತ ಬುಧವಾರ ಮಕಾವುಗೆ ಅಪ್ಪಳಿಸಿತು. ಗುರುವಾರ ಅದು ಬಿರುಗಾಳಿಯಗಿ ದುರ್ಬಲಗೊಂಡು ಒಳಪ್ರದೇಶಗಳಿಗೆ ಹಾದು ಹೋಯಿತು.

ಸುಮಾರು 27,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕ್ಸಿನುವ ಸುದ್ದಿ ಸಂಸ್ಥೆ ತಿಳಿಸಿದೆ. ಭಾರೀ ಮಳೆಯಿಂದಾಗಿ ಕೃಷಿ ಹೊಲಗಳಿಗೂ ವ್ಯಾಪಕ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News