×
Ad

45 ಕೆ.ಜಿ. ಗಾಂಜಾ ತಿಂದ ಇಲಿಗಳು !

Update: 2017-08-24 23:37 IST

ಧನಾಬಾದ್, ಆ. 24: ಬಿಹಾರದಿಂದ ಪಶ್ಚಿಮಬಂಗಾಳಕ್ಕೆ 145 ಕಿ.ಗ್ರಾಂ. ಗಾಂಜಾ ಸಾಗಾಟ ಮಾಡುತ್ತಿದ್ದ ಸಂದರ್ಭ ವ್ಯಕ್ತಿಯೋರ್ವನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಳ್ಳ ಲಾಗಿತ್ತು. ಆದರೆ, ಅದರಲ್ಲಿ 45 ಕೆ.ಜಿ. ಗಾಂಜಾವನ್ನು ಇಲಿಗಳು ತಿಂದು ನಾಶಪಡಿಸಿವೆ ಎಂದು ಜಾರ್ಖಂಡ್‌ನ ಧನ್‌ಬಾದ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜಿಲ್ಲೆಯ ಬರ್ವಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಂತಾರಾಜ್ಯ ಜಿ.ಟಿ. ರೋಡ್‌ನಲ್ಲಿ ಬಿಹಾರದ ಭೋಜ್‌ಪುರ ಜಿಲ್ಲೆಯ ಜಗದೀಶ್‌ಪುರದ ನಿವಾಸಿ ಶಿವಾಜಿ ಕುಮಾರ್‌ನಿಂದ 2016ರಲ್ಲಿ ಬೈಕ್‌ನಲ್ಲಿ ಕೊಂಡೊಯ್ಯುತ್ತಿದ್ದ 145 ಕಿ.ಗ್ರಾಂ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ವಶಪಡಿಸಿಕೊಳ್ಳಲಾದ ಗಾಂಜಾವನ್ನು ಬರ್ವಡ್ಡ ಪೊಲೀಸ್ ಠಾಣೆಯ ದಾಸ್ತಾನು ಕೊಠಡಿಯಲ್ಲಿ ಇರಿಸಿ, ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. 2016 ಜುಲೈ 11ರಂದು ಸ್ಥಳೀಯ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಜುಲೈ 5ರಂದು ಕುಮಾರ್ ವಿರುದ್ಧ ಆರೋಪಗಳನ್ನು ರೂಪಿಸಿದ ಬಳಿಕ ನ್ಯಾಯಾಲಯ ಬುಧವಾರ ಗಾಂಜಾವನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸುವಂತೆ ಪೊಲೀಸರಿಗೆ ತಿಳಿಸಿದೆ.

 ಪೊಲೀಸರು 100 ಕೆ.ಜಿ. ಗಾಂಜಾವನ್ನು ಮಾತ್ರ ನ್ಯಾಯಾಲಯದ ಮುಂದೆ ಪ್ರದರ್ಶಿಸಿದ್ದಾರೆ. ಗಾಂಜಾದ ಪ್ರಮಾಣದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದಾಗ, ಬರ್ವಡ್ಡ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದಿನೇಶ್ ಕುಮಾರ್, ದಾಸ್ತಾನು ಕೊಠಡಿಯಲ್ಲಿ ಪ್ಲಾಸ್ಟಿಕ್ ಗೋಣಿಯಲ್ಲಿ ಇರಿಸಲಾದ ಗಾಂಜಾವನ್ನು ಇಲಿಗಳು ತಿಂದಿವೆ ಎಂಬ ವರದಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News