ಉನ್ಮುಖ್ತ್ ಚಂದ್ ಎಂಬ ಇನ್ನೊಬ್ಬ ವಿರಾಟ್ ಕೊಹ್ಲಿ ಈಗ ಎಲ್ಲಿದ್ದಾರೆ ?
ಹೊಸದಿಲ್ಲಿ, ಆ.25: ಐದು ವರ್ಷಗಳ ಹಿಂದೆ ಭಾರತದ ಕ್ರಿಕೆಟ್ ಓರ್ವ ಹೊಸ ಸ್ಟಾರ್ ಆಟಗಾರನ ಆಗಮನವಾಗಿತ್ತು. ಅವರು ಅಂಡರ್-19 ಕ್ರಿಕೆಟ್ ತಂಡದ ನಾಯಕ ಉನ್ಮುಖ್ತ್ ಚಂದ್. ಅಂಡರ್-19 ವಿಶ್ವಕಪ್ ತಂಡದ ನಾಯಕರಾಗಿದ್ದ ಉನ್ಮುಖ್ತ್ ಚಂದ್ ಆಸ್ಟ್ರೇಲಿಯ ವಿರುದ್ಧದ ಫೈನಲ್‌ನಲ್ಲಿ ಶತಕ ದಾಖಲಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ನೆರವಾಗಿದ್ದರು.
ಆಗಸ್ಟ್ 26, 2012 ರಂದು ಉನ್ಮುಖ್ತ್ ಚಂದ್ ಅಂಡರ್-19 ತಂಡದ ನಾಯಕರಾಗಿ ವಿಶ್ವಕಪ್ ಎತ್ತಿದ ಘಟನೆಗೆ ಐದು ವರ್ಷ ಸಂದಿದೆ. ಆಗ ಉನ್ಮುಖ್ತ್ ಚಂದ್ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಸೇರಲು ಸಿದ್ಧರಾಗಿದ್ದಾರೆ ಎಂದು ಮಾಜಿ ಕೋಚ್ ಇಯಾನ್ ಚಾಪೆಲ್ ಹೇಳಿದ್ದರು. ಚಂದ್ ಬಳಿಕ ಡಿಲ್ಲಿ, ಉತ್ತರ ವಲಯ ಮತ್ತು ಭಾರತ ‘ಎ’ ತಂಡದ ನಾಯಕರಾದರು. ಒಮ್ಮೆಲೇ ಯುವ ಸ್ಟಾರ್ ಕ್ರಿಕೆಟಿಗನಾಗಿ ಗುರುತಿಸಲ್ಪಟ್ಟ ಉನ್ಮುಖ್ತ್ ಚಂದ್ ಬಳಿಕ ಸತತ ವೈಫಲ್ಯದ ಕಾರಣದಿಂದಾಗಿ ನಿಧಾನವಾಗಿ ತೆರೆಯ ಮರೆಗೆ ಸರಿದರು. ದೇಶಿಯ ಕ್ರಿಕೆಟ್‌ನಲ್ಲಿ ಸ್ಥಾನ ಕಳೆದುಕೊಂಡರು. ದಿಲ್ಲಿ ರಣಜಿ ತಂಡದಲ್ಲಿ ಅವರಿಗೆ ಅವಕಾಶ ಕೈತಪ್ಪಿತು. ವಿವಿಧ ಮಾದರಿಯ ಕ್ರಿಕೆಟ್‌ಗೆ ಹೊಂದಿಕೊಳ್ಳಲಾಗದೆ ಉನ್ಮುಖ್ತ್ ಚಂದ್ ವೈಫಲ್ಯ ಅನುಭವಿಸಿದ್ದಾರೆ. ಉನ್ಮುಖ್ತ್ ಚಂದ್ ಅವರಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಡರ್ 19 ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು. ಕೊಹ್ಲಿಯಂತೆ ಅವರಂತೆ ಉನ್ಮುಖ್ತ್ ಚಂದ್ ಅಗ್ರ ಸರದಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅದರೆ ಕೊಹ್ಲಿ ದಾರಿಯಲ್ಲಿ ಚಂದ್‌ಗೆ ಮುನ್ನಡೆಯಲು ಸಾಧ್ಯವಾಗಲಿಲ್ಲ.
ಕೊಹ್ಲಿ 2008ರಲ್ಲಿ ಅಂಡರ್ 19 ವಿಶ್ವಕಪ್ ಜಯಿಸಿದ ಬೆನ್ನೆಲ್ಲೆ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 2011ರಲ್ಲಿ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದರು.2016ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾದರು. 9 ವರ್ಷಗಳ ಅವಧಿಯಲ್ಲಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13,000 ರನ್ ಮತ್ತು 45 ಶತಕ ದಾಖಲಿಸಿದ್ದಾರೆ. ಕೊಹ್ಲಿ ಅವರಂತೆ ಅಂಡರ್ 19 ವಿಶ್ವಕಪ್ ತಂಡದ ನಾಯಕ ಚಂದ್‌ಗೆ ರಣಜಿ ಟ್ರೋಫಿ ತಂಡದಲ್ಲಿ ಅವಕಾಶ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.ಐಪಿಎಲ್‌ನಲ್ಲೂ ಅವರು ಯಾರಿಗೂ ಬೇಡವಾಗಿದ್ದಾರೆ ಇನ್ನೂ 24ರ ಹರೆಯದ ಕ್ರಿಕೆಟಿಗ ಉನ್ಮುಖ್ತ್ ಚಂದ್ ಕ್ರಿಕೆಟ್‌ನಲ್ಲಿ ಮಿಂಚಲು ಮತ್ತೆ ಹೋರಾಟ ನಡೆಸಬೇಕಾಗಿದೆ.