ತ್ರಿವಳಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಸಾಮಾಜಿಕ ಬಹಿಷ್ಕಾರದ ಭೀತಿ
Update: 2017-08-25 11:40 IST
ಕೊಲ್ಕತ್ತಾ, ಆ. 25: ತ್ರಿವಳಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಮಹಿಳೆ ಇಶ್ರತ್ ಜಹಾನ್ ಈಗ ಸಾಮಾಜಿಕ ಬಹಿಷ್ಕಾರದ ಭೀತಿ ಎದುರಿಸುತ್ತಿದ್ದಾರೆ. ಪ್ರಕರಣವನ್ನು ಸುಪ್ರೀಂಕೋರ್ಟ್‌ಗೆ ಒಯ್ದ ಜಹಾನ್ ಗೆ ಬಹಿಷ್ಕಾರ ಹಾಕಲು ಬಾವಂದಿರು ಹಾಗೂ ಹೌರಾದ ನೆರೆಹೊರೆಯವರು ಮುಂದಾಗಿದ್ದಾರೆ ಎನ್ನಲಾಗಿದೆ.
2014ರಲ್ಲಿ ದುಬೈನಲ್ಲಿದ್ದ ಪತಿಯಿಂದ ಫೋನ್ ಮೂಲಕ ತಲಾಕ್ ಪಡೆದಿದ್ದ ಜಹಾನ್, ಸುಪ್ರೀಂಕೋರ್ಟ್ ಮುಂದೆ ಪ್ರಕರಣ ಒಯ್ದ ಐದು ಮಹಿಳೆಯರಲ್ಲೊಬ್ಬರು.
"ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನನ್ನ ಚಾರಿತ್ರ್ಯವಧೆ, ನಿಂದನೆ ಮತ್ತು ನನ್ನ ವಿರುದ್ಧ ಅಪಪ್ರಚಾರ ವ್ಯಾಪಕವಾಗಿ ನಡೆಯುತ್ತಿದೆ. ಹಲವು ಮಂದಿ ನೆರೆಯವರು ನನ್ನ ಜತೆ ಮಾತನಾಡುವುದೂ ನಿಲ್ಲಿಸಿದ್ದಾರೆ" ಎಂದು ಜಹಾನ್ ಹೇಳಿದ್ದಾರೆ.
ಹೌರಾದ ಪಿಲ್ಖಾನಾ ಪ್ರದೇಶದಲ್ಲಿ 2004ರಿಂದ ಅವರು ವಾಸವಿದ್ದಾರೆ. ವಿವಾಹದ ವೇಳೆ ನೀಡಿದ ವರದಕ್ಷಿಣೆಯಿಂದ ಪತಿ ಖರೀದಿಸಿದ ಮನೆಯಲ್ಲೇ ಜಹಾನ್ ವಾಸವಿದ್ದಾರೆ. ಪತಿಯ ಅಣ್ಣ ಹಾಗೂ ಅವರ ಕುಟುಂಬವೂ ಅದೇ ಮನೆಯಲ್ಲಿ ವಾಸವಿದೆ.