ಸುದ್ದಿಗೋಷ್ಠಿಯಲ್ಲಿ ಕೆಮ್ಮುತ್ತಿದ್ದ ನೇಪಾಳ ಪ್ರಧಾನಿಗೆ ನೀರು ನೀಡಿದ ಸುಷ್ಮಾ ಸ್ವರಾಜ್
ಹೊಸದಿಲ್ಲಿ,ಆ.25: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಕೆಮ್ಮತೊಡಗಿದ್ದ ನೇಪಾಲದ ಪ್ರಧಾನಿ ಶೇರ್ ಬಹಾದುರ್ ದೇವುಬಾ ಅವರಿಗೆ ಕುಡಿಯುವ ನೀರನ್ನು ಸ್ವತಃ ನೀಡುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಆತಿಥೇಯರು ಹೇಗಿರಬೇಕು ಎನ್ನುವುದನ್ನು ತೋರಿಸಿದ್ದಾರೆ.
ಇಲ್ಲಿಯ ಹೈದರಾಬಾದ್ ಭವನದಲ್ಲಿ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಉಭಯ ಪ್ರಧಾನಿಗಳು ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ದೇವುಬಾ ಸುದ್ದಿಗಾರ ರನ್ನುದ್ದೇಶಿಸಿ ತನ್ನ ಮಾತುಗಳನ್ನು ಮುಗಿಸುವ ಹಂತದಲ್ಲಿದ್ದಾಗ ಕೆಮ್ಮು ಪ್ರಾರಂಭವಾಗಿ ಧ್ವನಿಯು ಕರ್ಕಶವಾಗಿತ್ತು. ಕೆಮ್ಮುತ್ತಲೇ ಅವರು ಮಾತು ಮುಂದುವರಿಸಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಸುಷ್ಮಾ ಅಧಿಕಾರಿಗಳಿಗಾಗಿ ಕಾಯದೇ ತನ್ನ ಆಸನದಿಂದ ಎದ್ದು ದೇವುಬಾರ ಬಳಿಗೆ ತೆರಳಿದರು. ಈ ವೇಳೆ ಮೋದಿ ತನ್ನೆದುರಿನ ಟೇಬಲ್‌ನಲ್ಲಿದ್ದ ನೀರಿನ ಜಾರ್‌ನ ಮುಚ್ಚಳವನ್ನು ತೆರೆದಿದ್ದು, ಗ್ಲಾಸ್‌ವೊಂದರಲ್ಲಿ ನೀರನ್ನು ಸುರಿದುಕೊಂಡ ಸುಷ್ಮಾ ಅದನ್ನು ದೇವುಬಾರಿಗೆ ನೀಡಿದರು. ಏನಾಗುತ್ತಿದೆ ಎಂದು ಉಭಯ ಕಡೆಗಳ ಅಧಿಕಾರಿಗಳಿಗೆ ತಿಳಿಯುವ ಮೊದಲೇ ಇದು ನಡೆದುಹೋಗಿತ್ತು.
ಅಂದ ಹಾಗೆ ಕೆಮ್ಮುತ್ತಲೇ ಭಾಷಣ ಮುಂದುವರಿಸಿದ್ದ ದೇವುಬಾರಿಗೆ ಸುಷ್ಮಾ ತನ್ನ ಬಳಿ ಬಂದಿದ್ದು ಗೊತ್ತಾಗಿರಲಿಲ್ಲ, ಹೀಗಾಗಿ ಸುಷ್ಮಾ ಕೈಯಲ್ಲಿ ನೀರಿನ ಗ್ಲಾಸ್ ಹಿಡಿದು ಕೊಂಡು ಕಾಯುತ್ತಿದ್ದರು. ಕೆಲ ಸಮಯದ ಬಳಿಕ ಅವರನ್ನು ಕಂಡ ದೇವುಬಾ ಅಚ್ಚರಿಗೊಂಡು ನೀರಿನ ಗ್ಲಾಸ್ ಪಡೆದುಕೊಂಡು ದೊಡ್ಡದೊಂದು ‘ಥ್ಯಾಂಕ್ಸ್’ ಹೇಳಿದರು.
ದೇವುಬಾ ನೀರು ಕುಡಿಯುತ್ತಿದ್ದಾಗ ಖಾಲಿ ಗ್ಲಾಸ್ ತೆಗೆದುಕೊಳ್ಳಲು ಸುಷ್ಮಾ ಕಾದು ನಿಂತಿದ್ದರು. ಆದರೆ ಅಧಿಕಾರಿಯೋರ್ವರು ಬಂದು ಆ ಕೆಲಸ ಮಾಡಿದಾಗ ಸುಷ್ಮಾ ಅದೇ ಮಂದಹಾಸದೊಂದಿಗೆ ತನ್ನ ಆಸನಕ್ಕೆ ಮರಳಿದರು.