×
Ad

ಗುರ್ಮಿತ್ ಸಿಂಗ್‌ಗೆ ಹರಿಯಾಣದ ಬಿಜೆಪಿ ಮಂತ್ರಿಗಳು 1.12 ಕೋಟಿ ರೂ. ಉಡುಗೊರೆ ಕೊಟ್ಟಿದ್ದರು !

Update: 2017-08-25 22:41 IST
ಹರ್ಯಾಣದ ರೋಹ್ಟಕ್‌ ಸುನಾರಿಯಾ  ಜೈಲಿನಲ್ಲಿ ಗುರ್ಮಿತ್ ಸಿಂಗ್

  ಹೊಸದಿಲ್ಲಿ, ಆ.25: ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧ (ಡಿಎಸ್‌ಎಸ್) ಮುಖ್ಯಸ್ಥ ಬಾಬಾ ಗುರ್ಮಿಟ್ ರಾಮ್ ರಹೀಂ ಸಿಂಗ್‌ಗೆ ಹರಿಯಾಣದ ಬಿಜೆಪಿ ಸರಕಾರದ ಮೂವರು ಸಚಿವರುಗಳು 1.12 ಕೋಟಿ ರೂ. ಉಡುಗೊರೆ ನೀಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
     ಗುರ್ಮಿತ್ ಸಿಂಗ್ ಅಪರಾಧಿ ಎಂದು ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹರಿಯಾಣ ದಲ್ಲಿ ಗುರ್ಮಿತ್‌ನ ಬೆಂಬಲಿಗರು ದಾಂದಲೆ ನಡೆಸಿದ್ದರು. ಹಿಂಸಾಚಾರದಿಂದಾಗಿ 32 ಮಂದಿ ಬಲಿಯಾಗಿದ್ದರು. 350 ಅಧಿಕ ಜನರು ಗಾಯಗೊಂಡಿದ್ದಾರೆ.

ಹಿಂಸಾಚಾರಕ್ಕಿಳಿದ ಗುರ್ಮಿತ್ ಸಿಂಗ್ ಬೆಂಬಲಿಗರ ಬಗ್ಗೆ ಹರಿಯಾಣದ ಬಿಜೆಪಿ ಸರಕಾರ ಮೃದುಧೋರಣೆ ತಳೆದ ಹಿನ್ನೆಲೆಯಲ್ಲಿ ಭಾರಿ ಹಿಂಸಾಚಾರ ಉಂಟಾಗಿತ್ತು.ಕೋಟ್ಯಂತರ ರೂ. ವೌಲ್ಯದ ಆಸ್ತಿಪಾಸ್ತಿಗಳು ಗುರ್ಮಿತ್ ಬೆಂಬಲಿಗರು ಹಚ್ಚಿದ ಬೆಂಕಿಗೆ ಧಗಧಗನೆ ಉರಿದು ಭಸ್ಮವಾಗಿತ್ತು.
 ಹಿಂಸಾಚಾರವನ್ನು ಹತ್ತಿಕ್ಕಲು ಗಮನ ನೀಡದ ಸರಕಾರವನ್ನು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸಚಿವ ರಾಜ್‌ನಾಥ್ ಸಿಂಗ್ ಅವರು ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್‌ನ್ನು ಚೆನ್ನಾಗಿ ಬೈದು ಪಂಚಕುಲಕ್ಕೆ ಕಳುಹಿಸಿದ್ದರು. ಗಲಭೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಸಿಎಂ ಖಟ್ಟರ್ ಪಂಚಕುಲಕ್ಕೆ ತೆರಳಿ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದ್ದರು.
  ಇದೀಗ ರಾಜ್ಯ ಬಿಜೆಪಿ ಸರಕಾರ ಮತ್ತು ಗುರ್ಮಿತ್ ಸಿಂಗ್ ನಡುವಿನ ವ್ಯವಹಾರ ಬಹಿರಂಗಗೊಂಡಿದೆ. ಸಚಿವರಾದ ರಾಮ್ ಬಿಲಾಸ್ ಶರ್ಮ, ಅನಿಲ್ ವಿಜ್ ಮತ್ತು ಗ್ರೋವೆರ್ ಒಟ್ಟು 1.12 ಕೋಟಿ ರೂ. ಮೊತ್ತದ ಉಡುಗೊರೆಯನ್ನು ಗುರ್ಮಿತ್‌ಗೆ ಆಗಸ್ಟ್ 15ರಂದು ಹುಟ್ಟು ಹಬ್ಬಕ್ಕೆ ಅರ್ಪಿಸಿದ್ದರು ಎಂದು ತಿಳಿದು ಬಂದಿದೆ.
  ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮ ಸ್ವಯಂಘೋಷಿತ ದೇವಮಾನವನಿಗೆ ಕ್ರೀಡೆಯ ಉತ್ತೇಜನಕ್ಕೆ ಸಚಿವರ ಕೋಟಾದಿಂದ 51 ಲಕ್ಷ ರೂ. ದೇಣಿಗೆ ನೀಡಿದ್ದರು ಎಂದು ಹೇಳಲಾಗಿದೆ.ಆಗಸ್ಟ್ 2016ರಲ್ಲಿ ಸಚಿವ ಅನಿಲ್ ವಿಜ್ 50 ಲಕ್ಷ ರೂ ನೀಡಿದ್ದರು . ಕೆಲವು ದಿನಗಳ ಹಿಂದೆ ಸಹಕಾರಿ ಸಚಿವ ಮನೀಶ್ ಗ್ರೋವೆರ್ 11 ಲಕ್ಷ ರೂ. ಸಚಿವರ ವಿವೇಚನಾ ನಿಧಿಯಿಂದ ಒದಗಿಸಿದ್ದರು ಎಂದು ವರದಿ ತಿಳಿಸಿದೆ.
  ಗುರ್ಮಿತ್ ಸಿಂಗ್ ಆಶ್ರಮಕ್ಕೆ ಬಿಜೆಪಿ ಸರಕಾರದ ಕೆಲವು ಸಚಿವರು ಹಾಗೂ ಶಾಸಕರು, ನಾಯಕರು ಆತನಿಂದ ಆಶೀರ್ವಾದ ಪಡೆಯಲು ಆಗಾಗ ಭೇಟಿ ನೀಡುತ್ತಿದ್ದರು.
ಗುರ್ಮಿತ್ ಸಿಂಗ್‌ಗೆ ಕಾಂಗ್ರೆಸ್‌ನ ಕೆಲವು ನಾಯಕರು ಪರಮಾಪ್ತರಾಗಿದ್ದಾರೆ. ಪಂಜಾಬ್‌ನ ಮುಖ್ಯ ಮಂತ್ರಿ ಅಮರೀಂದರ್ ಸಿಂಗ್ ಮತ್ತು ಹರಿಯಾಣದ ಮಾಜಿ ಮುಖ್ಯ ಮಂತ್ರಿ ಭೂಪೇಂದರ್ ಸಿಂಗ್ ಹೂಡಾ ಅವರು ಚುನಾವಣೆಯ ಮೊದಲು ಗುರ್ಮಿತ್ ಸಿಂಗ್ ಅವರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News