ಆಗಂತುಕನಿಂದ ಬಕಿಂಗ್‌ಹ್ಯಾಂ ಅರಮನೆ ಬಳಿ ಪೊಲೀಸರ ಮೇಲೆ ಚೂರಿ ದಾಳಿ
ಲಂಡನ್, ಆ.26: ಬಕಿಂಗ್‌ಹ್ಯಾಂ ಅರಮನೆಯ ಹೊರಭಾಗದಲ್ಲಿ ಪೊಲೀಸ್ ಅಧಿಕಾರಿಗಳ ಚೂರಿಯಿಂದ ದಾಳಿ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಇದೊಂದು ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯವೆಂದು ಪರಿಗಣಿಸಿ ಆತನನ್ನು ವಿಚಾರಣೆಗೊಳಪಡಿಸಿದ್ದಾರೆ.
ಶುಕ್ರವಾರ ರಾತ್ರಿ 8:35ರ ವೇಳೆಗೆ ಬಕಿಂಗ್‌ಹ್ಯಾಂ ಅರಮನೆ ಸಮೀಪದ ಸ್ಪರ್ ರಸ್ತೆಯ ಮಾಲ್‌ನ ನಿರ್ಬಂಧಿತ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನದ ಸಮೀಪವೇ ತನ್ನ ಕಾರನ್ನು ನಿಲ್ಲಿಸಿದ್ದ. ಪೊಲೀಸ್ ಅಧಿಕಾರಿಗಳು ಧಾವಿಸಿ ಬಂದು ವಾಹನದ ತಪಾಸಣೆ ನಡೆಸಿದಾ, ಅದರಲ್ಲಿ ಹರಿತವಾದ ಆಯುಧವೊಂದಿರುವುದು ಪತ್ತೆಯಾಯಿತು. ಪೊಲೀಸರು ಅಪರಿಚಿತನನ್ನು ಬಂಧಿಸಲು ಮುಂದಾದಾಗ ಆತ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರ ತೋಳುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ದಾಳಿಕೋರನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಪ್ರಶ್ನಿಸಲಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಬ್ರಿಟನ್ ರಾಣಿ ಎರಡನೆ ಎಲಿಝಬೆತ್ ಹಾಗೂ ರಾಜಕುಟುಂಬದ ಸದಸ್ಯರು ಅರಮನೆಯಲ್ಲಿ ಇರಲಿಲ್ಲವೆಂದು ತಿಳಿದುಬಂದಿದೆ.
ಈ ರ್ಷ ಬ್ರಿಟನ್ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದ್ದು, ಕಳೆದ ಮಾರ್ಚ್‌ನಲ್ಲಿ ಪಾದಚಾರಿಯೊಬ್ಬ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಬಳಿಕ ಪದಾಚಾರಿಗಳ ಮೇಲೆ ಕಾರುಹರಿಸಿ ನಾಲ್ವರನ್ನು ಹತ್ಯೆಗೈದಿದ್ದ.ಮೇನಲ್ಲಿ ಖ್ಯಾತ ಪಾಪ್‌ಗಾಯಕಿ ಅರಿಯಾನ್ ಗ್ರಾಂಡೆಯ ಸಂಗೀತಗೋಷ್ಠಿಯಲ್ಲಿ ನಡೆದ ಭಯೋತ್ಪಾದಕನೊಬ್ಬ ತನ್ನನ್ನು ತಾನೇ ಸ್ಫೋಟಿಸಿದಾಗ 23ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ 250 ಮಂದಿ ಗಾಯಗೊಂಡಿದ್ದರು.