ಸಿಗರೇಟ್ ಸೇದುವುದನ್ನು ಕಲಿಸಿದ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಕ್ಯಾನ್ಸರ್ ರೋಗಿ..!

Update: 2017-08-27 14:01 GMT

ಹೊಸದಿಲ್ಲಿ, ಆ.27: ಗಂಟಲು ಕ್ಯಾನ್ಸರ್ ರೋಗಿಯೊಬ್ಬ ತನಗೆ ಸಿಗರೇಟ್ ಸೇದಲು ಕಲಿಸಿದ್ದ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.

ಆರೋಪಿಯನ್ನು ಮುಸ್ತಕೀಂ ಅಹ್ಮದ್ ಎಂದು ಗುರುತಿಸಲಾಗಿದ್ದು, ದಿಲ್ಲಿಯ ರೆಸ್ಟೋರೆಂಟ್ ಒಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಇನಾಯತ್ ಎಂದು ಗುರುತಿಸಲಾಗಿದ್ದು, ಈತ ಉತ್ತಮ್ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.

“ಅಹ್ಮದ್ ಹಾಗೂ ಇನಾಯತ್ ಒಳ್ಳೆಯ ಸ್ನೇಹಿತರಾಗಿದ್ದರು. ಇನಾಯತ್ ತನ್ನ ಕೆಲಸದಿಂದ ರೆಸ್ಟೋರೆಂಟ್ ಮಾಲಕನ ಮೆಚ್ಚುಗೆ ಗಳಿಸಿದ್ದ” ಎಂದು ಡಿಜಿಪಿ ಶಿಬೇಶ್ ಸಿಂಗ್ ಹೇಳಿದ್ದಾರೆ.

ಅಹ್ಮದ್ ಗೆ ಸಿಗರೇಟ್ ಹಾಗೂ ಮರಿಜುವಾನಾ ಸೇದುವುದನ್ನು ಇನಾಯತ್ ಕಲಿಸಿದ್ದ ಎನ್ನಲಾಗಿದೆ. ಈ ಸಮಯದಲ್ಲೇ ಅಹ್ಮದ್ ಗೆ ಗಂಟಲಿನಲ್ಲಿ ಇನ್ಫೆಕ್ಷನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಈತ ವೈದ್ಯರನ್ನು ಸಂಪರ್ಕಿಸಿದ್ದು, ಗಂಟಲಿನ ಕ್ಯಾನ್ಸರ್ ಗೆ ತುತ್ತಾಗಿರುವುದಾಗಿ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.

ನಂತರ ತನಗೆ ಸಿಗರೇಟ್ ಸೇದಲು ಕಲಿಸಿದ್ದ ಇನಾಯತ್ ಈ ಸ್ಥಿತಿಗೆ ಕಾರಣ ಎಂದು ಅಹ್ಮದ್ ದೂಷಿಸುತ್ತಿದ್ದ. ಅಹ್ಮದ್ ನ ಕೆಲಸದ ಮಟ್ಟವೂ ಕುಸಿದ ಕಾರಣ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಕೋಪಗೊಂಡ ಅಹ್ಮದ್ ತನ್ನ ಗ್ರಾಮಕ್ಕೆ ತೆರಳಿದ್ದ. ಈ ಸಂದರ್ಭ  ಬಂದೂಕೊಂದನ್ನು ಖರೀದಿಸಿ ಗ್ರಾಮದಲ್ಲೇ ಗುಂಡಿಕ್ಕುವ ಪ್ರಾಕ್ಟೀಸ್ ಮಾಡುತ್ತಿದ್ದ ಎನ್ನಲಾಗಿದೆ.

ಗುರುವಾರ ರೆಸ್ಟೋರೆಂಟ್ ಗೆ ತೆರಳಿದ ಅಹ್ಮದ್ ತನ್ನ ಸಂಬಂಧಿ, ಹೋಟೆಲ್ ಮಾಲಕರೊಡನೆ ಇನಾಯತ್ ನನ್ನು ಕೆಲಸದಿಂದ ತೆಗೆದು ಹಾಕುವಂತೆ ಹೇಳಿದ್ದ. ಆದರೆ ಮಾಲಕ ಅದನ್ನು ನಿರಾಕರಿಸಿದ್ದು, ಅಲ್ಲಿಂದ ಇನಾಯತ್ ನೆಡೆಗೆ ತೆರಳಿ ಆತನೊಂದಿಗೆ ಜಗಳ ಮಾಡಿ ಕೊನೆಗೆ ಗುಂಡಿಕ್ಕಿದ್ದಾನೆ ಎನ್ನಲಾಗಿದೆ.

ತಕ್ಷಣವೇ ಇನಾಯತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿದ್ದ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News